ಸುದ್ದಿಮೂಲವಾರ್ತೆ
ಗಂಗಾವತಿ,ಏ.೭- ಶ್ರೀರಾಮಚಂದ್ರನ ಬಂಟ ಹನುಮನ ಜನ್ಮ ಸ್ಥಳವಾದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಅಭಿವೃದ್ಧಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಗಂಗಾವತಿ ಹಿಂದುತ್ವದ ಕ್ಷೇತ್ರವನ್ನಾಗಿ ಬಿಂಬಿಸಿದ್ದು, ಕೋಮು-ಗಲಭೆಗಳ ಸೃಷ್ಠಿಕರ್ತ ಎಂದು ಆರೋಪ ಹೊತ್ತಿದ್ದ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದು ಸರಿಯಲ್ಲ. ಚುನಾವಣೆಯಲ್ಲಿ ಅನ್ಸಾರಿಗೆ ಸೋಲು ನಿಶ್ಚಿತ ಎಂದು ಗಂಗಾವತಿ ಕ್ಷೇತ್ರದ ಕೈ ಟಿಕೆಟ್ ಪ್ರಬಲ ಆಕಾಂಕ್ಷಿ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಸಧ್ಯದ ಚಿತ್ರಣವನ್ನೆಲ್ಲಾ ನಮ್ಮ ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗಿತ್ತು. ಪಕ್ಷ ನಡೆಸಿದ ಸರ್ವೆಯಲ್ಲಿಯೂ ಅನ್ಸಾರಿ ಬದಲು ತಮಗೆ ಟಿಕೆಟ್ ನೀಡಬೇಕೆಂದಿತ್ತು. ಅಭ್ಯರ್ಥಿಗಳ ದ್ವಿತೀಯ ಘೋಷಣೆ ಪಟ್ಟಿಯಲ್ಲಿಯೂ ಈ ಕ್ಷೇತ್ರದಿಂದ ನನ್ನ ಹೆಸರೇ ಅಂತಿಮಗೊಳಿಸಲಾಗಿತ್ತು. ಇನ್ನೇನು ನನ್ನ ಹೆಸರು ಘೋಷಣೆಯಾಗಲಿದೆ ಎನ್ನುವಷ್ಟರಲ್ಲಿ ಕೊನೆ ಕ್ಷಣದಲ್ಲಿ ಇಕ್ಬಾಲ್ ಅನ್ಸಾರಿ ಹೆಸರು ಘೋಷಣೆಯಾಗಿದ್ದು ನನಗೇ ಆಶ್ಚರ್ಯವಾಗಿದೆ ಎಂದರು.
ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ಗೆ ಏಕೆ ಹಿನ್ನಡೆಯಾಗುತ್ತದೆ ಮತ್ತು ತಮಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲುವಿಗೆ ಹೇಗೆ ಅನುಕೂಲವಾಗುತ್ತದೆ ಎನ್ನುವುದರ ಎಲ್ಲ ಮಾಹಿತಿಯನ್ನು ಪಕ್ಷದ ರಾಜ್ಯ ಹಾಗೂ ಕೇಂದ್ರ ಮಟ್ಟದ ವರಿಷ್ಠರ ಗಮನಕ್ಕೆ ತರಲಾಗಿತ್ತು. ಪಕ್ಷದ ವರಿಷ್ಠರೂ ಕೂಡ ತಮಗೇ ಟಿಕೆಟ್ ನೀಡುವುದಾಗಿ ಭರವಸೆ ಕೂಡ ಕೊಟ್ಟಿದ್ದರು. ಆದರೆ ಪಕ್ಷದ ಹೈಕಮಾಂಡ್ ಕೊನೆ ಘಳಿಗೆಯಲ್ಲಿ ಪಕ್ಷದ ಗೆಲುವಿನ ಹಿತಕ್ಕಿಂತ ಜ್ಯಾತಿವಾದಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ವ್ಯಕ್ತಿ ಪ್ರತಿಷ್ಠೆಗೆ ಮಣೆ ಹಾಕಿ ಇಕ್ಬಾಲ್ ಅನ್ಸಾರಿ ಹೆಸರು ಘೋಷಿಸಿದೆ ಎಂದು ಶ್ರೀನಾಥ್ ಸಿದ್ಧರಾಮಯ್ಯರ ಮತ್ತು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಶ್ರೀನಾಥ್ ತಮ್ಮೊಳಗಿನ ಅಸಮಧಾನ ಹೊರ ಹಾಕಿದರು.
ಅನ್ಸಾರಿಗೆ ಮುಂದೆ ರಾಜ್ಯದಲ್ಲಿ ಸರಕಾರ ಬಂದರೆ ಎಂಎಲ್ಸಿ ಇಲ್ಲವೇ ಇತರ ಹುದ್ದೆಗಳನ್ನು ನೀಡುವುದಾಗಿ ಪಕ್ಷದ ಹೈಕಮಾಂಡ್ ಭರವಸೆ ನೀಡಿ ತಮಗೆ ಗಂಗಾವತಿ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ಗೆ ಗೆಲುವಾಗುತ್ತಿತ್ತು. ತಮಗೆ ಗೆಲುವಾದರೆ ಹಿಂದೆ ತಮ್ಮ ತಂದೆಯವರ ಕಾಲದಲ್ಲಿದ್ದಂತೆ ಗಂಗಾವತಿಯಲ್ಲಿರುವ ನಮ್ಮ ಮನೆ ಪುನಃ ಜಿಲ್ಲೆಯ ಕಾಂಗ್ರೆಸ್ ವೈಟ್ ಹೌಸ್ ಆಗುವ ಮೂಲಕ ರಾಜಕೀಯ ಶಕ್ತಿ ಕೇಂದ್ರವಾದರೆ ತಮ್ಮ ರಾಜಕೀಯಕ್ಕೆ ಕುತ್ತು ಬರುತ್ತದೆ ಎಂದು ಭಾವಿಸಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಇತರ ಮುಖಂಡರು ಸಿದ್ಧರಾಮಯ್ಯರ ಮೂಲಕ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಕೊಡಿಸುವಲ್ಲಿ ಕೈ ಆಡಿಸಿದ್ದಾರೆ.
ಹಿಂದೆ ನಮ್ಮ ತಂದೆಯವರಾದ ಎಚ್.ಜಿ.ರಾಮುಲು ಸಂಸದರಿದ್ದ ಮತ್ತು ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಾಗೂ ತಾವೂ ಕೂಡ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ಕೊಪ್ಪಳ ಅವಿಭಾಜ್ಯ ರಾಯಚೂರು ಜಿಲ್ಲೆ ಜೊತೆಗೆ ಅಂದಿನ ಕೊಪ್ಪಳ ಲೋಕಸಭಾ ವ್ಯಾಪ್ತಿಯ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ. ಜ್ಯಾತಿ, ಪ. ಪಂಗಡ, ಹಿಂದುಳಿದ ಹಾಗೂ ವೀರಶೈವ ಲಿಂಗಾಯತ ವರ್ಗಗಳಿಗೆ ರಾಜಕೀಯ ಸ್ಥಾನ-ಮಾನ ದೊರಕಿಸಲಾಗಿತ್ತು.
ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಹಾಲುಮತ ಕುರುಬ ಸಮುದಾಯ ಮತ್ತು ಅಲ್ಪ ಸಂಖ್ಯಾತರಿಗೆ ಹೆಚ್ಚಿನ ರಾಜಕೀಯ ಸ್ಥಾನ-ಮಾನ ಕೊಡಿಸಲಾಗಿತ್ತು. ಆದರೆ ಇವತ್ತು ಈ ಎರಡೂ ಸಮುದಾಯಗಳಿಂದಲೇ ನಮಗೆ ಮತ್ತು ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಅನ್ಯಾಯವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.