ಸುದ್ದಿಮೂಲ ವಾರ್ತೆ
ತುಮಕೂರು, ಏ.8: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕೊರಟಗೆರೆ ಹಾಗೂ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ ಏಪ್ರಿಲ್ 5 ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 20.50ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟೇನಹಳ್ಳಿ ಚೆಕ್ಪೋಸ್ಟ್ನಲ್ಲಿ ಸ್ವಿಫ್ಟ್ ಕಾರು ನಿಲ್ಲಿಸಿ
ತಪಾಸಣೆ ನಡೆಸಿದಾಗ 1.50ಲಕ್ಷ ರೂ. ನಗದು ದೊರೆತಿದ್ದು, ವಾಹನದಲ್ಲಿದ್ದ ರುದ್ರೇಶ್ ಅವರನ್ನು ವಿಚಾರಿಸಿದಾಗ ಹಣದ ಮೂಲದ ಬಗ್ಗೆ ಸೂಕ್ತ ದಾಖಲೆ ನೀಡದ ಕಾರಣ ಹಣವನ್ನು ವಶಕ್ಕೆ ಪಡೆದು
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅದೇ ರೀತಿ ತಿಪಟೂರು ನಗರ ಮಾಲ್ ಮುಂಭಾಗ ಏಪ್ರಿಲ್ 5ರ ಬೆಳಿಗ್ಗೆ ಒಂದು ಎಟಿಎಂ ವಾಹನವನ್ನು ತಪಾಸಣೆ ನಡೆಸಿದಾಗ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ 19 ಲಕ್ಷ ರೂ.ಗಳನ್ನು ಸಾಗಿಸುತ್ತಿದ್ದುದು
ಕಂಡು ಬಂದಿದ್ದು, ಸರಿಯಾದ ದಾಖಲೆಗಳನ್ನು ಒದಗಿಸದೇ ಇದ್ದುದರಿಂದ ಅನುಮಾನದ ಮೇರೆಗೆ ಸದರಿ ವಾಹನ ಮತ್ತು ಹಣವನ್ನು ಪೊಲೀಸ್ ಠಾಣೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.