ಸುದ್ದಿಮೂಲ ವಾರ್ತೆ,
ಬೀದರ: ಮೇ.10ರಂದು ನಡೆಯಲಿರುವ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಬೀದರ್ ದಕ್ಷಿಣ ಕ್ಷೇತ್ರದ ಮತದಾರರು, ಅಭಿಮಾನಿಗಳು, ಹಿತೈಷಿಗಳು ಯಾರೂ ಅನ್ಯ ಪಕ್ಷಗಳ ಮುಖಂಡರ ಮಾತುಗಳಿಗೆ ಕಿವಿ ಕೊಡಬೇಡಿ. ಸೂರ್ಯ- ಚಂದ್ರರು ಇರುವುದೆಷ್ಟು ಸತ್ಯವೋ, ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಹ ಅಷ್ಟೇ ಸತ್ಯ ಎಂದು ಕಾಂಗ್ರೆಸ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನನಗೆ ಸಿಗುತ್ತಿರುವ ಜನ ಬೆಂಬಲದಿಂದ ಎದುರಾಳಿ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿದೆ. ಆದ್ದರಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಗಾಳಿ ಸುದ್ದಿಯನ್ನು ತೇಲಿ ಬಿಡಲಾಗಿದೆ. ನನ್ನ ಕಾರ್ಯಕರ್ತರು, ಅಭಿಮಾನಿಗಳು, ಕ್ಷೇತ್ರದ ಸಹಸ್ರಾರು ಸಂಖ್ಯೆಯ ಮತದಾರರು ಯಾವುದಕ್ಕೂ ಬೆಲೆ ಕೊಡಬೇಡಿ ಎಂದು ಚಂದ್ರಾಸಿಂಗ್ ಅವರು ಜನರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
13ರಂದು ನಾಮಪತ್ರ ಸಲ್ಲಿಕೆ
ಏಪ್ರಿಲ 13 ರಂದು ತಾವು ನಾಮಪತ್ರ ಸಲ್ಲಿಸುತ್ತಿದ್ದು, ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಹಸ್ರಾರು ಮತದಾರರು, ಬೆಂಬಲಿಗರು, ಕಾರ್ಯಕರ್ತರು ಈ ವೇಳೆ ಹಾಜರಿದ್ದು, ಆಶೀರ್ವದಿಸಬೇಕು ಎಂದು ಚಂದ್ರಾಸಿಂಗ್ ಮನವಿ ಮಾಡಿದ್ದಾರೆ. ಎಪ್ರಿಲ 13 ರಂದು ಬೆಳಿಗ್ಗೆ 11ಕ್ಕೆ ಬೀದರ ನಗರದ ಗುಂಪಾ ರಸ್ತೆಯ ಕೈಲಾಶ್ ಲೇ ಔಟ್ನ ತಮ್ಮ ನಿವಾಸದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಗುತ್ತದೆ. ಆದ್ದರಿಂದ ಈ ವೇಳೆ ಕ್ಷೇತ್ರದ ಮತದಾರರು. ಅಭಿಮಾನಿಗಳು. ಕಾರ್ಯಕರ್ತರು. ಹಿತೈಷಿಗಳೆಲ್ಲ ಆಗಮಿಸಿ ನನಗೆ ಬೆಂಬಲ ಸೂಚಿಸಿ, ಆಶೀರ್ವಾದ ಮಾಡಬೇಕು ಎಂದು ಕಾಂಗ್ರೆಸ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ಮನವಿ ಮಾಡಿದ್ದಾರೆ.