ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.17: ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅಪಮಾನ ಹಾಗೂ ತಮ್ಮನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಬೇಸತ್ತು ತಮ್ಮ ಸ್ವಾಭಿಮಾನ ರಕ್ಷಣೆಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಈ ದಿನ ರಾಜ್ಯಕ್ಕೆ ವಿಶೇಷವಾದ ದಿನ. ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆ, ಅಭಿವೃದ್ಧಿ, ಪ್ರಗತಿ, ಒಗ್ಗಟ್ಟು ತರುವ ದಿನ. ಸರಳ, ಸಜ್ಜನಿಕೆಯ ನಾಯಕ, 6 ಬಾರಿ ಶಾಸಕರಾಗಿ ಸೋಲಿಲ್ಲದ ಸರದಾರ, ಸ್ವಾಭಿಮಾನಿ, ಸುದೀರ್ಘ ರಾಜಕಾರಣದ ಪಯಣದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದ ನಾಯಕ ಜಗದೀಶ್ ಶೆಟ್ಟರ್. ಅವರು ಇಂದು ಇಡೀ ರಾಷ್ಟ್ರಕ್ಕೆ ದೊಡ್ಡ ಸಂದೇಶ ನೀಡಲು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್ ಆಗಿ ಕೆಲಸ ಮಾಡಿರುವ ಜಗದೀಶ್ ಶೆಟ್ಟರ್ ಅವರು ಇಂದು ಪಕ್ಷಕ್ಕೆ ಸೇರುತ್ತಿದ್ದು, ಅವರಿಗೆ ಪಕ್ಷದ ಪರವಾಗಿ ತುಂಬು ಹೃದಯದ ಸ್ವಾಗತ ಕೋರುತ್ತೇನೆ. ಅವರ ಸೇರ್ಪಡೆ ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆಯ ಮುನ್ಸೂಚನೆ ಸಿಕ್ಕಂತಾಗಿದೆ.
ನನಗೆ ನಿನ್ನೆ ರಾತ್ರಿಯಿಂದ ಚಾಮರಾಜನಗರದಿಂದ ಬೆಳಗಾವಿವರೆಗೆ ಅನೇಕ ಬಿಜೆಪಿ ನಾಯಕರು ಹಾಗೂ ಶೆಟ್ಟರ್ ಅವರ ಅಭಿಮಾನಿಗಳು ಕರೆ ಮಾಡಿ ನಾವು ಕಾಂಗ್ರೆಸ್ ಪಕ್ಷ ಸೇರುತ್ತೇವೆ ಎವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಇಂದು ತುರ್ತಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದ್ದು, ಜಿಲ್ಲಾ ಮಟ್ಟದಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಲಾಗಿದೆ.’
ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿ ಎದುರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಂದ ಅಪಮಾನವಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಸೇರಿದಂತೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲರಿಗೂ ಅಪಮಾನ ಮಾಡಲಾಗಿದೆ. ಲಿಂಗಾಯತ ಸಮುದಾಯದ ಆತ್ಮಗೌರಕ್ಕೆ ಧಕ್ಕೆಯಾಗಿದ್ದು, ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಲಿಂಗಾಯತ ಸಮುದಾಯ ಹೇಗೆ ಕಾಂಗ್ರೆಸ್ ಪರವಾಗಿ ನಿಂತಿತ್ತೋ ಅದೇ ರೀತಿ ಈ ಬಾರಿಯು ಲಿಂಗಾಯತ ಸಮುದಾಯ ಕಾಂಗ್ರೆಸ್ ಪರವಾಗಿ ನಿಲ್ಲಲಿದೆ’ ಎಂದು ತಿಳಿಸಿದರು.
ಶೆಟ್ಟರ್ ಅವರು ಅವರು ಯಾವ ಷರತ್ತು ಇಟ್ಟಿದ್ದಾರೆ ಎಂದು ಕೇಳಿದಾಗ, ‘ಜಗದೀಶ್ ಶೆಟ್ಟರ್ ಅವರು ಯಾವುದೇ ಷರತ್ತನ್ನು ಇಟ್ಟಿಲ್ಲ. ಅವರು ಬೇಷರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಪಕ್ಷ ಸೇರುತ್ತಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಒಗ್ಗೂಡಿಸಲು ಸಾಧ್ಯ’ ಎಂದು ತಿಳಿಸಿದರು.
ಪಕ್ಷಕ್ಕೆ ಇನ್ನು ಎಷ್ಟು ಜನ ನಾಯಕರು ಸೇರುತ್ತಾರೆ ಎಂದು ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷ ಸೇರಲು ಅನೇಕ ನಾಯಕರು ಸೇರಲು ಮುಂದಾಗಿದ್ದಾರೆ. ಆದರೆ ನಾವು ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರನ್ನು ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿಲ್ಲ’ ಎಂದು ತಿಳಿಸಿದರು