ಸುದ್ದಿಮೂಲ ವಾರ್ತೆ
ಮಾಲೂರು, ಏ.18: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದಾಗ ಮಾಡಿದ ಅಭಿವೃದ್ಧಿ ಹಾಗೂ ಪ್ರಸ್ತುತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಜನತೆಯ ಅನುಕೂಲಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಯೇ ಜೆ.ಡಿ.ಎಸ್.ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಎಂದು ಮಾಲೂರು ವಿಧಾನಸಭಾಕ್ಷೇತ್ರದ ಜೆ.ಡಿ.ಎಸ್.ಅಭ್ಯರ್ಥಿ ಜಿ.ರಾಮೇಗೌಡ ತಿಳಿಸಿದರು.
ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಾನು ಇಂಜಿನಿಯರ್ ಆಗಿದ್ದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷದ ಪ್ರಣಾಳಿಕೆಯೊಂದಿಗೆ ನನದೇ ಆದ ಅಜೆಂಡಾ ಹೊಂದಿದ್ದೇನೆ. ಕಳೆದ 20 ವರ್ಷಗಳಿಂದ ಪ್ರತಿ ದಿನ ಜನಸೇವೆ ಮಾಡುವ ಮೂಲಕ ಮನೆ
ಮನೆಗೆ ನನ್ನದೇ ಆದ ಸೇವೆ ಮಾಡಿದ್ದೇನೆ.ಕ್ಷೇತ್ರದ ಜನತೆಯ ಸೇವೆಯನ್ನು ರಾಜಕೀಯವಾಗಿ
ಇನ್ನೂ ಹೆಚ್ಚಿಗೆ ಮಾಡಲು ಶಾಸಕನ್ನಾಗಿ ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ಇದೆಯೆಂದು ಹೇಳಿದರು.
ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಈಗಾಗಲೇ ಕ್ಷೇತ್ರದ ಸುಮಾರು 50 ಸಾವಿರ ಕುಟುಂಬಗಳ ಮನೆ ಮನೆಗೆ ಭೇಟಿ ನೀಡಿ ನನ್ನ ಮುಂದಿ ಯೋಜನೆಗಳ ಹಾಗೂ ಪಕ್ಷದ ಪ್ರಣಾಳಿಕೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದೇನೆ ಹಾಗೂ ಅವರ ಸಮಸ್ಯೆಗಳ ಬಗ್ಗೆ ಆಲಿಸಿ ಪಟ್ಟಿ ಮಾಡಿ ಕೊಂಡಿದ್ದೇವೆ. ಜನತೆ ಅಧಿಕಾರ ನೀಡಿದ ದಿನದಿಂದಲೇ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆ ಬಗೆಹರಿಸುವ ಬಗ್ಗೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ರಶ್ಮಿ ರಾಮೇಗೌಡ ಮಾತನಾಡಿ, ಸ್ಥಳೀಯರಾಗಿ ಕಳೆದ 20 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿರುವ ನಿಮ್ಮ ಮನೆ ಮಗನಂತಿರುವ ನಮ್ಮಗಳ ಸೇವಕ ನಮ್ಮ ಯಜಮಾನರಾದ ರಾಮೇಗೌಡರಿಗೆ ಒಂದು ಅವಕಾಶ ನೀಡಿ ನಿಮ್ಮಗಳ ಸೇವೆಗೆ ಅನುವು ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಚಂದ್ರಶೇಖರ್ ಗೌಡ, ಬಿಕೆ.ನಾರಾಯಣಸ್ವಾಮಿ, ಡಿಕೆ .ರಮೇಶ್, ಆನಂದ್, ಮಂಜುನಾಥ್, ವಿಜಯ್ ಕುಮಾರ್, ನಿಖಿಲ್ ಗೌಡ, ಸಂಪತ್, ಸಂಜು, ಸಂದೀಪ್, ಚೋಟುಬಾಯ್, ಸುಮಂಗಳ, ಮಂಗಳಮ್ಮ, ಸೇರಿದಂತೆ ಇನ್ನಿತರರಿದ್ದರು.