ಸುದ್ದಿಮೂಲ ವಾರ್ತೆ
ಗದಗ, ಏ.18: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರೋಣದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿದ ಭಗವಂತ್ ಮಾನ್, ನಂತರ ರೋಣ ನಗರಕ್ಕೆ ತೆರಳಿ ಅಲ್ಲಿನ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಜೊತೆ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದರು.
ಮೆರವಣಿಗೆಯಲ್ಲಿ ಮಾತನಾಡಿದ ಸಿಎಂ ಭಗವಂತ್ ಮಾನ್ “ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಭ್ರಷ್ಟ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಆ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯವಿಲ್ಲವೆಂದು ಜನರಿಗೆ ಮನವರಿಕೆ ಆಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚನೆಯಾಗಬೇಕು. ಜನರ ಹಣವನ್ನು ಲೂಟಿ ಮಾಡುವವರ ಬದಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಆ ಹಣವನ್ನು ಜನರ ಜೀವನಮಟ್ಟ ಸುಧಾರಣೆಗೆ ಬಳಸುವ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬೇಕು. ದೆಹಲಿ ಹಾಗೂ ಪಂಜಾಬ್ನಲ್ಲಿನ ಶಿಕ್ಷಣ ಹಾಗೂ ಆರೋಗ್ಯ ಕ್ರಾಂತಿ ಕರ್ನಾಟಕದಲ್ಲೂ ಆಗಬೇಕು” ಎಂದು ಭಗವಂತ್ ಮಾನ್ ಹೇಳಿದರು.
ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸೇರಿದಂತೆ ಅನೇಕ ನಾಯಕರುಗಳು ಈ ಸಂದರ್ಭದಲ್ಲಿ ಹಾಜರಿದ್ದರು
ಏಪ್ರಿಲ್ 19ರ ಬುಧವಾರಂದು ಕೂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಗವಂತ್ ಮಾನ್ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ರೋಡ್ ಶೋ ಹಾಗೂ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಬಾಗಲಕೋಟೆ ಜಿಲ್ಲೆಯ ತೆರದಾಳಿನಲ್ಲಿ ರೋಡ್ ಶೋ ಹಾಗೂ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 3 ಗಂಟೆಗೆ ತೆರದಾಳಿನಲ್ಲಿ ನಡೆಯುವ ರೈತರ ರ್ಯಾಲಿಯಲ್ಲೂ ಭಗವಂತ್ ಮಾನ್ ಉಪಸ್ಥಿತರಿರುತ್ತಾರೆ.