ಸುದ್ದಿಮೂಲ ವಾರ್ತೆ
ತುಮಕೂರು. ಏ.18: ವೆಬ್ ಕಾಸ್ಟಿಂಗ್ ಸಂಬಂಧ ಗುರುತಿಸಲಾಗಿರುವ ಮತಗಟ್ಟೆಗಳಿಗೆ ಕಡ್ಡಾಯವಾಗಿ ಆರ್ಐ ಮತ್ತು ವಿಎಗಳು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧಾನಸಭೆ ಚುನಾವಣೆ ಸಂಬಂಧ 11 ವಿಧಾನಸಭಾ ಕ್ಷೇತ್ರಗಳ ಆರ್ಒ,ಎಆರ್ಓಗಳಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಗತ್ಯತೆ ಕುರಿತು ಅಧಿಕಾರಿಗಳು ಪುನರ್ ಪ್ರಮಾಣೀಕರಿಸಬೇಕು ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಜಿಲ್ಲೆಗೆ ಆಗಮಿಸುವ ವೀಕ್ಷಕರಿಗೆ ಸಲ್ಲಿಸಲು ವಿಧಾನಸಭಾವಾರು ಬುಕ್ಲೆಟ್ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ವೀಕ್ಷಕರಿಗೆ ಸಂಬಂಧಿಸಿದಂತೆ ಹ್ಯಾಂಡ್ ಬುಕ್ ಪರಿಶೀಲಿಸಿ ಚೆಕ್ಲೀಸ್ಟ್ ಮಾಹಿತಿಯನ್ನು ಪಡೆದು ಬುಕ್ಲೆಟ್ಗಳನ್ನು ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಚುನಾವಣಾ ವೀಕ್ಷಕರುಗಳ ಲೈಸನ್ ಅಧಿಕಾರಿಗಳಾಗಿ ನೇಮಿಸಲ್ಪಟ್ಟಿರುವ ಅಧಿಕಾರಿಗಳು ಚುನಾವಣಾ ವೀಕ್ಷಕರುಗಳೊಂದಿಗೆ ಸಂಪೂರ್ಣ ಸಮ್ವನಯ ಸಾಧಿಸಿ ಅವರಿಗೆ ಸಹಕಾರ ನೀಡಬೇಕು, ಎಲ್ಲಿಯೂ ಸಹ ಯಾವುದೇ ವೀಕ್ಷಕರುಗಳಿಂದ ದೂರುಬಾರದಂತೆ ಲೈಸನ್ ಅಧಿಕಾರಿಗಳು ವರ್ತಿಸಬೇಕು ಎಂದು ಸೂಚಿಸಿದರು.
ಅಂಚೆ ಮತದಾನ ಮಾಡಲು ಬಯಸುವ 80+ ಹಾಗೂ ವಿಶೇಷ ಚೇತನ ಮತದಾರರಿಗೆ ನೀಡಿದ್ದ 12ಡಿ ನಮೂನೆಯನ್ನು ಭರ್ತಿ ಮಾಡಿದ ಪ್ರತಿಯನ್ನು ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬೇಕು, ನಮೂನೆ-12ಡಿ ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ಆರ್ಒಗಳು ಅಪ್ಡೇಟ್ ಮಾಡಬೇಕು ಎಂದರಲ್ಲದೆ, ಮತದಾನ ಮಾಡಲು ಅವರಿಗೆ ಏಪ್ರಿಲ್ 29 ರಿಂದ ಮೇ 6ರವರೆಗೆ ಕಾಲಾವಕಾಶ ನಿಗದಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಮಹಾನಗರ ಪಾಲಿಕೆಯ ಆಯುಕ್ತ ಹೆಚ್.ವಿ. ದರ್ಶನ್ ಉಪಸ್ಥಿತರಿದ್ದರು.