ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.18: ಬಿಟಿಎಂ ಲೇಔಟ್ನಲ್ಲಿ ರಾಮಲಿಂಗಾರೆಡ್ಡಿ, ಕೆ.ಆರ್. ಪುರದಲ್ಲಿ ಬೈರತಿ ಬಸವರಾಜ್ ಸಹಿತ ಹಲವರು ಬೆಂಗಳೂರಿನಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಕ್ಷೇತ್ರದ ಹಾಲಿ ಶಾಸಕ ರಾಮಲಿಂಗಾರೆಡ್ಡಿ ಕೋರಮಂಗಲದ ಮುಖ್ಯರಸ್ತೆಯ ಶ್ರೀ ಗಣೇಶನ ದೇವಸ್ಥಾದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಮುಖಂಡರೊಂದಿಗೆ ಹಾಗೂ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರ್ಯಾಲಿಯಲ್ಲಿ ತೆರಳಿ ಚುನಾವಣೆ ಅಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಜನರ ಬಯಕೆಯೂ ಸಹ ಕಾಂಗ್ರೆಸ್ ಆಡಳಿತ ನಡೆಸಬೇಕೆಂದು. ಈಗ ಜನರ ಮನಸ್ಸಿನಿಂದಲೇ ಬರುತ್ತಿದೆ. ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿರುವ ಬಿಜೆಪಿ ತೊಲಗದೆ ಹೋದರೆ ಮುಂದಿನ ದಿನದಲ್ಲಿ ರಾಜ್ಯ ಹಾಗೂ ರಾಷ್ಟ್ರ ಅತ್ಯಂತ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದು ಈಗ ಜನರಿಗೆ ಮನವರಿಕೆ ಆಗಿರುವ ಹಿನ್ನೆಲೆಯಲ್ಲಿ ಜನರೇ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡಿ ಉತ್ತಮ ಆಡಳಿತ ನಡೆಸಲು ಅವಕಾಶ ಕಲ್ಪಿಸಿಕೊಡಲಿದ್ದಾರೆ ಎಂದರು.
ಬಿಜೆಪಿ ದುರಾಡಳಿತದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಕಾನೂನು ವ್ಯವಸ್ಥೆಗಳ ವೈಫಲ್ಯ, ಇದನ್ನು ಸರಿದಾರಿಗೆ ತರಬೇಕಾದರೆ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಲೇಬೇಕು ಕಾಂಗ್ರೆಸ್ ಆಡಳಿತ ನಡೆಸಿದರೆ ರಾಜ್ಯದಲ್ಲಿ ಅಭಿವೃದ್ಧಿ, ಶಾಂತಿ, ನೆಮ್ಮದಿ, ಎಲ್ಲಾ ಧರ್ಮದ ಜನರಿಗೂ ಕಾಂಗ್ರೆಸ್ ಪಕ್ಷ ನ್ಯಾಯ ದೊರಕಿಸಿ ಕೊಡುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲಾ ಭರವಸೆಗಳನ್ನ ಸಂಪೂರ್ಣವಾಗಿ ಈಡೇರಿಸಿ ಬೆಲೆ ಏರಿಕೆಯನ್ನು ತಡೆಗಟ್ಟುವ ಮೂಲಕ ಹಾಗೂ ಭ್ರಷ್ಟಾಚಾರ ಮುಕ್ತಆಡಳಿತವನ್ನು ಕಾಂಗ್ರೆಸ್ ಜನರಿಗೆ ನೀಡುತ್ತದೆ. ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿರುವ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷವು ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸಿ ಉತ್ತಮ ಜನಪರ ಆಡಳಿತ ನೀಡುವಲ್ಲಿ ನಾವು ಸೂಕ್ತ ಗಮನವನ್ನು ಹರಿಸುತ್ತೇವೆ ಎಂದು ತಿಳಿಸಿದರು.
ಮಹದೇವಪುರ:
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು.
ಅರವಿಂದ ಲಿಂಬಾವಳಿ ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಬದಲು ಅವರ ಪತ್ನಿಗೆ ಟಿಕೆಟ್ ನೀಡಲಾಗಿದ್ದು, ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ.
ಕೆ.ಆರ್.ಪುರ:
ಬೆಂಗಳೂರಿನ ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಸಚಿವ ಬಿ.ಎ.ಬಸವರಾಜ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ಬಂದ ಅವರು ಬಳಿಕ ಕೆ.ಅರ್.ಪುರ ಬಿಬಿಎಂಪಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.