ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.20: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾ ಕೃಷ್ಣ ಅವರು ಇಂದು ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಎಂ ಕೃಷ್ಣಪ್ಪ ಅವರು ಮಂಗಳವಾರ ಅಪಾರ ಸಂಖ್ಯೆಯ ಜನಸಮೂಹದೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು . ಇಂದು ಅವರ ಪುತ್ರ ಗೋವಿಂದರಾಜನಗರದ ಕೈ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.
ಅದಕ್ಕೂ ಮುನ್ನ ಪ್ರಿಯಾ ಕೃಷ್ಣ ಅವರು, ರಾಜಾಜಿನಗರದ 6ನೇ ಬ್ಲಾಕ್ ನಲ್ಲಿರುವ ಶ್ರೀ ಗಣೇಶನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ವಿನಾಯಕನ ಆಶೀರ್ವಾದ ಪಡೆದರು. ನಂತರ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಗೋವಿಂದರಾಜನಗರದ ಚುನಾವಣಾ ಅಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ರಾಜಾಜಿನಗರದ 6ನೇ ಬ್ಲಾಕ್ ನಿಂದ ಆರಂಭವಾದ ಮೆರವಣಿಗೆಯು, ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ, ಟೋಲ್ ಗೇಟ್, ದಾಸರಹಳ್ಳಿಯ ನವೀನ್ ಪಾರ್ಕ್, ಗೋವಿಂದರಾಜನಗರ, ಶೋಭಾ ಆಸ್ಪತ್ರೆ, ಮೂಡಲಪಾಳ್ಯ ವೃತ್ತ, ನಾಗರಭಾವಿ ವೃತ್ತ, ಚಂದ್ರಲೇಔಟ್ ನ 80 ಅಡಿ ರಸ್ತೆ ಮಾರ್ಗವಾಗಿ, ಗೋವಿಂದರಾಜನಗರದ ಚುನಾವಣಾ ಅಧಿಕಾರಿಗಳ ಕಛೇರಿ ತಲುಪಿತು.
ಮೆರವಣಿಗೆ ಆರಂಭಕ್ಕೂ ಮುನ್ನ, ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು, ದಾರಿಯುದ್ದಕ್ಕೂ
ಪಕ್ಷದ ಬಾವುಟ ಹಿಡಿದು, ನೆಚ್ಚಿನ ನಾಯಕನಿಗೆ ಜೈಕಾರ ಹಾಕುತ್ತ ಸಾಗಿದರು.
ಮಹಿಳೆಯರು, ಪುರುಷರು, ಯುವಕರು ಸೇರಿದಂತೆ 15ಸಾವಿರಕ್ಕೂ ಅಧಿಕ ಜನ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ, ಪ್ರಿಯಾ ಕೃಷ್ಣ ಅವರಿಗೆ ಸಾಥ್ ನೀಡಿದರು. ಈ ವೇಳೆ ಡೋಲು, ವೀರಗಾಸೆ, ಕೀಲುಗೊಂಬೆ ಕುಣಿತ ಸೇರಿದಂತೆ ಹಲವು ಜನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಮತ್ತಷ್ಟು ಹೆಚ್ಚಿಸಿದವು.