ಸುದ್ದಿಮೂಲ ವಾರ್ತೆ
ತುಮಕೂರು, ಏ.21: ಜಿಲ್ಲೆಯಲ್ಲಿನ 432 ಮದ್ಯದಂಗಡಿಗಳಲ್ಲಿ ಆನ್ಲೈನ್ ಪಾವತಿ ಉತ್ತೇಜಿಸುವ ಸಂಬಂಧ ಎಲ್ಲ ಮದ್ಯದಂಗಡಿಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾ ಅಬಕಾರಿ ಆಯಕ್ತರಿಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ನಿರ್ದೇಶನ ನೀಡಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರುಗಳೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಸಂಜೆ ಸಭೆ ನಡೆಸಲಾಯಿತು.
ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರುಗಳನ್ನು ಸ್ವಾಗತಿಸಿದ ಜಿಲ್ಲಾಧಿಕಾರಿಗಳು,ಚುನಾವಣಾ ವೀಕ್ಷಕರ ಸಲಹೆಯ ಮೇರೆಗೆ ಈ ಮೇಲಿನಂತೆ ನಿರ್ದೇಶನ ನೀಡಿದರು.
ಮತದಾರರು ಬಿಸಿಲಿನಲ್ಲಿ ಬಸವಳಿಯದಂತೆ ಮತಗಟ್ಟೆಗಳ ಬಳಿ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. 80 ವರ್ಷ ಮೇಲ್ಪಟ್ಟ ಮತದಾರರ ಮತದಾನ ಗೌಪ್ಯತೆ, ಮತಗಟ್ಟೆಗಳ ಬಳಿ ಬಿಎಲ್ಓಗಳ ಮಾಹಿತಿ ಅಳವಡಿಕೆ ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪರಿಚಯ ಮಾಡಿಕೊಟ್ಟ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಒಟ್ಟು 2683 ಮತಗಟ್ಟೆಗಳಿದ್ದು, 11 ವಿಧಾನಸಭಾ ಕ್ಷೇತ್ರಗಳಿಗೆ 11 ಚುನಾವಣಾಧಿಕಾರಿಗಳು, 12 ಎಆರ್ಓಗಳು, 232 ಸೆಕ್ಟರ್ ಅಧಿಕಾರಿಗಳು, 2683 ಬಿಎಲ್ಓಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ, ಮಾಧ್ಯಮ ಸಮನ್ವಯ, ಮಾನವ ಸಂಪನ್ಮೂಲ ನಿರ್ವಹಣೆ, ಇವಿಎಂ ನಿರ್ವಹಣೆ, ತರಬೇತಿ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಎಂಸಿಸಿ ಮುಂತಾದ ಚುನಾವಣಾ ಕಾರ್ಯಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಜಿಲ್ಲೆಯಲ್ಲಿ ಕೈಗೊಳ್ಳಲಾದ ಸಮಗ್ರ ಪೊಲೀಸ್ ಬಂದೋಬಸ್ತ್ ಕುರಿತು ಪೊಲೀಸ್ ವೀಕ್ಷಕರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.