ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.21: ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಮಳೆಯ ಕಾರಣ ಶುಕ್ರವಾರ ಸಂಜೆ ನಡೆಯಬೇಕಿದ್ದ ಅವರು ರೋಡ್ ಶೋ ರದ್ದಾಗಿದೆ.
ಅಮಿತ್ ಶಾ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಸ್ವಾಗತಿಸಿದರು.
ರಾಜ್ಯದಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದರಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ವಿಜಯಪುರದಲ್ಲಿ ಅಮಿತ್ ಶಾ ರೋಡ್ ಶೋಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ದೇವನಹಳ್ಳಿ ತಾಲ್ಲೂಕಿನಲ್ಲಿ ಒಂದು ಗಂಟೆಗೆ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ರೋಡ್ ಶೋ ರದ್ದು ಮಾಡಲಾಯಿತು.
‘ಮಳೆ ಹೆಚ್ಚಾದ ಕಾರಣ ಹೈಕಮಾಂಡ್ ನಾಯಕರು ಈ ರೋಡ್ ಶೋ ರದ್ದು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕಾರ್ಯಕ್ರಮ ಮಾಡುತ್ತೇವೆ. ಮತ್ತೆ ನಾವು ಇದೇ ಜಾಗದಲ್ಲಿ ಸೇರೋಣ. ವರುಣ ದೇವರು ನಮಗೆ ಆಶೀರ್ವಾದ ಮಾಡಿದ್ದಾರೆ. ಪುನಃ ಕಾರ್ಯಕ್ರಮ ಆಯೋಜಿಸಿ ಘೋಷಣೆ ಮಾಡುತ್ತೇವೆ,’ ಎಂದು ಚುನಾವಣಾ ಉಸ್ತುವಾರಿ ಅಣ್ಣಾಮಲೈ ಹೇಳಿದರು.
ಅಮಿತ್ ಶಾ ರೋಡ್ ಶೋ ರದ್ದಾಗುತ್ತಿದ್ದಂತೆಯೇ ಅವರಿಗಾಗಿ ತರಿಸಲಾಗಿದ್ದ 250 ಕೆಜಿ ತೂಕದ ಸೇಬಿನ ಹಾರವನ್ನು ಜನರು ಚಿಂದಿ ಮಾಡಿದ್ದಾರೆ. ಹಾರಕ್ಕೆ ಕೈ ಹಾಕಿ ಸೇಬುಗಳನ್ನು ಜನರು ಕಿತ್ತುಕೊಂಡು ಹೋಗಿದ್ದು, ಕ್ಷಣಾರ್ಧದಲ್ಲೇ ಹಾರದಲ್ಲಿದ್ದ ಸೇಬುಗಳೆಲ್ಲವೂ ಖಾಲಿಯಾಗಿ ಹೋಗಿವೆ.