ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.24: ತೀವ್ರ ಕುತೂಹಲ ಕೆರಳಿಸಿರುವ ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಚಾರ ಅಭಿಯಾನ ತೀವ್ರಗೊಂಡಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಿಜೆಪಿ ವರಿಷ್ಠ ಅಮಿತ್ ಶಾ, ಜೆಡಿಎಸ್ ಮುಖಂಡರು ಪ್ರಚಾರ ತೀವ್ರಗೊಳಿಸಿದ್ದಾರೆ.
ಲಿಂಗಾಯತ ಸಮುದಾಯದ ಬೆಂಬಲ ಕುರಿತು ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಖಂಡ ಶರಣ ಶರಣೆಯರ ನಾಡಿನಲ್ಲಿ ಪ್ರಚಾರ ನಡೆಸಿದರು. ಬಸವೇಶ್ವರ ಜಯಂತಿಯಂದು ಕ್ರಾಂತಿಯೋಗಿ ಬಸವಣ್ಣ ನಡೆದಾಡಿದ, ಐಕ್ಯವಾದ ಕೂಡಲ ಸಂಗಮ ಸೇರಿದಂತೆ ಹಲವಡೆ ಪ್ರಚಾರ ನಡೆಸಿದ್ದು ಪ್ರತಿಪಕ್ಷ ಬಿಜೆಪಿ ಪಾಳೆಯವನ್ನು ಅಲುಗಾಡಿಸಿದೆ. ಒಂದು ಕಡೆ ಬಿಜೆಪಿ ನಾಯಕರು ವೀರಶೈವ ಮಠ ಮಂದಿರಗಳಿಗೆ ಭೇಟಿ ನೀಡಿ ಒಳ ರಾಜಕಾರಣ ಮಾಡುತ್ತಿದ್ದರೆ ರಾಹುಲ್ ಗಾಂಧಿ ಸದ್ದಿಲ್ಲದೇ ವೀರಶೈವ ಮತಬುಟ್ಟಿಗೆ ಕೈ ಹಾಕಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ವಿಚಾರ ಮುನ್ನೆಲೆಗೆ ಬಂದಿರುವ ಹೊತ್ತಿನಲ್ಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಚಾರದ ಮತಬೇಟೆ ನಡೆಸಿದರು. ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಹೆಲಿಪ್ಯಾಡ್ನಿಂದ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಿ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಪಾಲ್ಗೊಂಡರು.
ಇದೇ ವೇಳೆ ಹೆಲಿಪ್ಯಾಡ್ನಲ್ಲಿ ಚುನಾವಣಾಧಿಕಾರಿಗಳು ರಾಹುಲ್ಗಾಂಧಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ನಡೆಸಿ ವೀಡಿಯೊ ಚಿತ್ರೀಕರಣ ಮಾಡಿಕೊಂಡರು. ರಾಹುಲ್ಗಾಂಧಿ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ರಣೋತ್ಸಾಹ ಕಂಡು ಬಂದಿದ್ದು, ಸಾವಿರಾರು ಕಾರ್ಯಕರ್ತರು ಯುವ ನಾಯಕನ ಜತೆ ಹೆಜ್ಜೆ ಹಾಕಿ ಪ್ರಚಾರ ನಡೆಸಿದರು.
ಬಸವಣ್ಣನವರ ಕರ್ಮಭೂಮಿ ಕೂಡಲಸಂಗಮದಲ್ಲಿ ರಾಹುಲ್ ರ್ಯಾಲಿ ನಡೆಸಿ ಲಿಂಗಾಯಿತ ಮತ ಬುಟ್ಟಿಗೆ ಕೈ ಹಾಕಿದ್ದಾರೆ.ಅದುವೇ ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ ಕೊಡುತ್ತಿದ್ದು, ಲಿಂಗಾಯತ ಮತಗಳನ್ನ ಸೆಳೆಯುವ ಯತ್ನ ಮಾಡಿದ್ದಾರೆ. ನಂತರ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿ ಅಲ್ಲಿಂದ ವಿಜಯಪುರಕ್ಕೆ ತೆರಳಿದರು. ಸಂಜೆ ವಿಜಯಪುರ ನಗರದಲ್ಲಿ ರೋಡ್ ಶೋ ನಡೆಸಲಿದರು.
ವಿಜಯಪುರ ನಗರದ ಶಿವಾಜಿ ವೃತ್ತದಿಂದ ಕನಕದಾಸರ ವೃತ್ತದವರೆಗೆ ಎರಡು ಕಿಲೋ ಮಿಟರ್ ರೋಡ್ ಶೋ ಮಾಡಲಿರುವ ರಾಹುಲ್ ಗಾಂಧಿ. ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ್ದ ಮಾರ್ಗವಾಗಿ ಕನಕದಾಸ ವೃತ್ತಕ್ಕೆ ಹೋಗಿ ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ರಾತ್ರಿ ವಿಜಯಪುರದಲ್ಲೇ ರಾಹುಲ್ ವಾಸ್ತವ್ಯ ಹೂಡಿದ್ದಾರೆ.
ಲಿಂಗಾಯತ ಮತಬುಟ್ಟಿ ಮೇಲೆ ಕಣ್ಣು ಹಾಕಿರುವ ಸಮಯದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಆಪರೇಷನ್ ಮಾಡಿದೆ. ಚಿತ್ತಾಪುರ ಮೂಲದ ಲಿಂಗಾಯತ ಸಮುದಾಯದ ನಾಯಕ ವಿಶ್ವನಾಥ್ ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.
ಪ್ರಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಜಗದೀಶ್ಶೆಟ್ಟರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ಇತರ ಮುಖಂಡರು ಪ್ರಚಾರ ನಡೆಸಿದರು.
ಮೈಸೂರಿಗೆ ಅಮಿತ್ ಶಾ
ಬಿಜೆಪಿ ರಾಷ್ಟ್ರೀಯ ನಾಯಕರ ದಂಡು ರಾಜ್ಯಕ್ಕೆ ಭೇಟಿ ನೀಡಿ ಸರಣಿ ಸಮಾವೇಶ, ರೋಡ್ ಶೋ ನಡೆಸುವ ಮೂಲಕ ಮತಬೆಟೆಗೆ ಮುಂದಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರಕ್ಕಾಗಿ ಇಂದು ರಾತ್ರಿ ಮೈಸೂರಿಗೆ ಆಗಮಿಸಿ ರ್ಯಾಡಿಸನ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದರು. ನಾಳೆ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಚಾರ ನಡೆಸಲಿದ್ದಾರೆ
ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಇದಾದ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ತೆರಳಿ ರೋಡ್ ಶೋ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಹೇಶ್ ಟೆಂಗಿನಕಾಯಿ ಅವರನ್ನು ಗೆಲ್ಲಿಸಿಕೊಂಡು ಬರಲು ಹುಬ್ಬಳ್ಳಿಯಲ್ಲಿ ನಾಳೆ ರಾತ್ರಿ ವಾಸ್ತವ್ಯ ಹೂಡಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಮತದಾರರ ಓಲೈಕೆಗೆ ಬಿಜೆಪಿ ಕಸರತ್ತು ನಡೆಸಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಮುಖರು, ವಿವಿಧ ರಾಜ್ಯಗಳ ನಾಯಕರು ಈಗಾಗಲೇ ಅಲ್ಲಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಚಾರದ ಅಖಾಡಕ್ಕೆ ಧುಮುಕಿ, ಬೆಂಗಳೂರಿನಿಂದ ರೋಡ್ ಶೋ ನಡೆಸಿ ೬ ಜಿಲ್ಲೆಗಳಲ್ಲಿ ಮತಬೇಟೆ ನಡೆಸಿದರು.
ಹಲವು ಕ್ಷೇತ್ರಗಳಲ್ಲಿ ಸಿಎಂ ಪ್ರವಾಸ:
ಚಾಲುಕ್ಯ ಹೋಟೆಲ್ ಸಮೀಪ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವರಾಜ ಬೊಮ್ಮಾಯಿ ಅವರು “ಜನವಾಹಿನಿ” ವಾಹನದಲ್ಲಿ ರೋಡ್ ಶೋಗೆ ಚಾಲನೆ ನೀಡಿದರು. ಸಾವಿರಾರು ಕಾರ್ಯಕರ್ತರು ಈ ರೋಡ್ ಶೋನಲ್ಲಿ ಭಾಗಿಯಾದರು. ಒಂದೇ ದಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಇಂದು ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ಡಾಬಸ್ಪೇಟೆಯಲ್ಲಿ ರೋಡ್ ಶೋ ನಡೆಸಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದರು. ಯಲಹಂಕದಲ್ಲಿ ಪಕ್ಷದ ಅಭ್ಯರ್ಥಿ ಎಸ್.ಆರ್. ವಿಶ್ವನಾಥ್ ಪರ ಮತಬೇಟೆ ನಡೆಸಿದರು.
ಮಧ್ಯಾಹ್ನದ ನಂತರ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯಲ್ಲೂ ರಾತ್ರಿಯವರೆಗೆ ಪ್ರಚಾರ ನಡೆಸಿದರು. ತುಮಕೂರು ಗ್ರಾಮಾಂತರ, ಗುಬ್ಬಿ, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೋಡ್ಶೋ ನಡೆಸಿ ರಾತ್ರಿ ವಾಸ್ತವ್ಯ ಹೂಡಿದರು.
ನಾಳೆ ದಾವಣಗೆರೆಯಿಂದ ರೋಡ್ ಶೋ ಆರಂಭಿಸಲಿರುವ ಮುಖ್ಯಮಂತ್ರಿಗಳು ಹರಿಹರ, ರಾಣೆಬೆನ್ನೂರು, ಹಾವೇರಿ, ಬಂಕಾಪುರ, ಸವಣೂರು, ಶಿಗ್ಗಾವಿ, ಕುಂಧಗೋಳದಲ್ಲಿ ಪ್ರಚಾರ ನಡೆಸಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏ. 25 ರಂದು ಹುಬ್ಬಳ್ಳಿಗೆ ಆಗಮಿಸಿ, 26ರಂದು ಶಿರಸಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸೊರಬ, ಮೂಡಿಗೆರೆಯಲ್ಲಿ ಮತಯಾಚಿಸಲಿದ್ದಾರೆ.