ಸುದ್ದಿಮೂಲ ವಾರ್ತೆ
ಬೆಂಗಳೂರು , ಏ.24: ಏಪ್ರಿಲ್ 20ರಂದು ರಾಜ್ಯ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಅಂದು ಮಧ್ಯಾಹ್ನ 3 ಗಂಟೆ ಒಳಗೆ ನಾಮಪತ್ರ ಸಲ್ಲಿಕೆಯಾಗಬೇಕಿತ್ತು. ಡಬಲ್ ಇಂಜಿನ್ ಸರ್ಕಾರ ದೇಶದ ಪ್ರತಿ ಆಡಳಿತ ಯಂತ್ರಗಳ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ರಮೇಶ್ ಬಾಬು ಹೇಳಿದರು
ರಾಜ್ಯದಲ್ಲಿ ಅನೇಕ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಾಂತ್ರಿಕ ಕಾರಣಗಳಿಗೆ ತಿರಸ್ಕೃತವಾಗಬೇಕಿತ್ತು. ಆಯೋಗ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ. ಸವದತ್ತಿ ಯೆಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಗಡುವು ಮುಕ್ತಾಯದ ನಂತರ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಅಫಿಡವಿಟ್ ಛಾಪಾಕಾಗದವನ್ನು 20ನೇ ತಾರೀಕೂ 7.30ಕ್ಕೆ ವಿಕಾಸ್ ಕೋಆಪರೇಟಿವ್ ಸೋಸೈಟಿ ಸಹಕಾರ ಸಂಘದಿಂದ ಖರೀದಿ ಮಾಡಿದ್ದಾರೆ. ಇಸ್ಟಾಂಪಿಂಗ್ ಪ್ರಕಾರ ಇಡೀ ರಾಜ್ಯದಲ್ಲಿ ಇದನ್ನು ಸಂಜೆ 5ಗಂಟೆ ಒಳಗಾಗಿ ನೀಡಬೇಕು ಎಂದು ಕಾನೂನಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ 7.38 ಗಂಟೆಗೆ ಛಾಪಾಕಾಗದ ನೀಡಲಾಗಿದೆ. ಈ ಛಾಪಾಕಾಗದ ಖರೀದಿ ಮಾಡಿರುವುದೇ ಅಕ್ರಮ.
ಇದನ್ನು ಚುನಾವಣಾ ಆಯೋಗ ಅಪ್ಲೋಡ್ ಮಾಡಿದ್ದು, ಬಹಳ ಆಶ್ಚರ್ಯವೆಂದರೆ, ಏಪ್ರಿಲ್ 20ರಂದು ಖರೀದಿ ಮಾಡಲಾಗಿರುವ ಛಾಪಾಕಾಗದದ ದಾಖಲೆಯನ್ನು ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಏಪ್ರಿಲ್ 19ರಂದೇ ಅಪ್ಲೋಡ್ ಮಾಡಿದೆ. ಇದು ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆ.
ಬಿಜೆಪಿ ಅಭ್ಯರ್ಥಿ ನಾಮಪತ್ರ ರಕ್ಷಣೆ ಮಾಡಲು ರಾಜ್ಯ ಚುನಾವಣಾ ಆಯೋಗ, ತಮ್ಮ ನೀತಿ ನಿಯಮ ಉಲ್ಲಂಘನೆ ಮಾಡಿದ್ದು, 20ರಂದು ಸಲ್ಲಿಕೆ ಮಾಡಲಾಗಿರುವ ದಾಖಲೆಯನ್ನು 19ರಂದೇ ಅಪ್ಲೋಡ್ ಮಾಡಲಾಗಿದೆ ಎಂದು ತೋರಿಸುತ್ತಿದ್ದಾರೆ. ಇದು ಹೇಗೆ ಸಾಧ್ಯ? ಇದರಲ್ಲಿ ನಡ್ಡಾ, ಅಮಿತ್ ಶಾ, ಮೋದಿ ಅಥವಾ ನಮ್ಮ ಪೇಸಿಎಂ ಬೊಮ್ಮಾಯಿ ಅವರು ಹಸ್ತಕ್ಷೇಪ ಮಾಡಿದ್ದಾರಾ? ಕೇಂದ್ರ ಚುನಾವಣಾ ಆಯೋಗದ ರಾಜ್ಯ ವಿಭಾಗದ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಯಾರು ಇದರಲ್ಲಿ ಪ್ರಭಾವ ಬೀರಿದ್ದಾರೆ ಎಂದು ಮಮುಖ್ಯಚುನಾವಣಾಧಿಕಾರಿಗಳು ಮಾಹಿತಿ ನೀಡಬೇಕು.
ಡಬಲ್ ಇಂಜಿನ್ ಸರ್ಕಾರದ ಮೋಸಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾವು ಆಯೋಗವನ್ನು ನಂಬಿದ್ದೇವೆ. ಆದರೆ ಇವರು ರಾಜ್ಯದ ಆರೂವರೆ ಕೋಟಿ ಜನರ ನಂಬಿಕೆಗೆ ದ್ರೋಹ ಬಗೆಯಬಾರದು. ಡಬಲ್ ಇಂಜಿನ್ ಸರ್ಕಾರದ ಕಚೇರಿಗಳಿಂದ ಒತ್ತಡ ಬಂದಿದ್ದರೆ ಅದನ್ನು ತಿಳಿಸಿ. ಸವದತ್ತಿ ಮತ ಕ್ಷೇತ್ರದ ಬಿಜೆಪಿ ನಾಮಪತ್ರ ಅಂಗೀಕಾರ ಮಾಡಿರುವುದೇಕೆ ಎಂದು ಸ್ಪಷ್ಟನೆ ನೀಡಬೇಕು. ಜನರಲ್ಲಿ ಎದ್ದಿರುವ ಅನುಮಾನ ಬಗೆಹರಿಸಬೇಕು.
ಶ್ರೀಮತಿ ಮಾಮನಿ ಅವರು ಏಪ್ರಿಲ್ 20ರ ಮಧ್ಯಾಹ್ನ 3 ಗಂಟೆ ಒಳಗಾಗಿ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿಲ್ಲ. ಆದರೂ ಚುನಾವಣಾ ಆಯೋಗ ಯಾವ ಕಾರಣಕ್ಕೆ ಸಮಯ ಮೀರಿದ ಅಫಿಡವಿಟ್ ಪಡೆದಿದೆ ಎಂಬುದಕ್ಕೆ ಉತ್ತರ ನೀಡಬೇಕು. ಇದರಲ್ಲಿ ರಾಜ್ಯ ಸರ್ಕಾರ ಅಕ್ರಮದಲ್ಲಿ ಭಾಗಿಯಾಗಿದ್ದು, ಇದನ್ನು ಕಾಂಗ್ರೆಸ್ ಖಂಡಿಸಲಿದೆ. ಆಯೋಗ ಈಗಲೂ ಸವದತ್ತಿ ಯೆಲ್ಲಮ್ಮ ಬಿಜೆಪಿ ಅಭ್ಯರ್ಥಿ ನಾಮಪತ್ರವನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಲಿದೆ. ಆಮೂಲಕ ನಿಮ್ಮ ಅಕ್ರಮ ಬಯಲಿಗೆಳೆಯುತ್ತೇವೆ. ನಾವು ಈ ವಿಚಾರವಾಗಿ ಈಗಲೇ ನ್ಯಾಯಾಲಯದ ಮೆಟ್ಟಿಲೇರಬೇಕು ಎಂಬುದಿಲ್ಲ, ಚುನಾವಣೆ ನಂತರವೂ ನಾವು ನ್ಯಾಯಾಲಯದ ಮೆಟ್ಟಿಲೇರಬಹುದು.
ಇನ್ನು ಜೇವರ್ಗಿಯಲ್ಲಿ ಪದವೀಧರ ಯುವಕ ಉದ್ಯೋಗ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರ ಹೊರತಾಗಿ 7-8 ಲಕ್ಷ ಖಾಸಗಿ ಉದ್ಯೋಗಗಳಿಗೆ ಅವಕಾಶವಿದೆ. ದುರಂತವೆಂದರೆ ಕರ್ನಾಟಕ ಸರ್ಕಾರ ಪ್ರತಿ ತಿಂಗಳು ಉದ್ಯೋಗ ಮೇಳ ಮಾಡುತ್ತಿದೆ. ಕೈಗಾರಿಕಾ ಸಚಿವರಾದ ನಿರಾಣಿ ಅವರ ಖಾತೆಯಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಈ ಇಲಾಖೆ ಉದ್ಯೋಗ ನೀಡುವ ಬದಲು ಖಾಸಗಿ ಕಂಪನಿಗಳಿಗೆ ಭೂಮಿ ನೀಡುವುದು, ಅವರಿಂದ 40% ಕಮಿಷನ್ ಪಡೆಯುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ವಿಶೇಷವಾಗಿ ಡಬಲ್ ಇಂಜಿನ್ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಅವರು ಹೇಳಿದ್ದರು. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ 15 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ಇದರಿಂದ ಹತಾಶರಾಗಿ ಯುವಕರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದು ತಪ್ಪು.
ಬಿಜೆಪಿ ಅವಧಿಯಲ್ಲಿ 1129 ಯುವಕರು ಉದ್ಯೋಗ ಸಿಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ಉದ್ಯೋಗ ಖಾಲಿ ಇದ್ದು, 50-60 ಸಾವಿರ ಉದ್ಯೋಗ ಖಾಲಿ ಇದ್ದು, ಅನುಮೋದನೆ ಇದ್ದರೂ ಅದನ್ನು ಭರ್ತಿ ಮಾಡಿಲ್ಲ. ಇನ್ನು ಪಿಎಸ್ಐ ನೇಮಕಾತಿಗೆ 1.25 ಲಕ್ಷ ಆಕಾಂಕ್ಷಿಗಳು ಅರ್ಜಿ ಹಾಕಿದ್ದರು. ಆದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣ ಇವರ ಕನಸು ನುಚ್ಚುನೂರಾಗಿವೆ. ಇತರೆ ಇಲಾಖೆ ನೇಮಕಾತಿಗಳಲ್ಲೂ ಅಕ್ರಮ ನಡೆದಿವೆ. ಈ ಅಕ್ರಮವನ್ನು ತಡೆಯಲು ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಇಷ್ಟೆಲ್ಲಾ ಆದರೂ ಬೊಮ್ಮಾಯಿ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರು ಜೇವರ್ಗಿಯ ಯುವಕನ ಮನೆಗೆ ಭೇಟಿ ನೀಡಿ, ಆತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಬೇಕು. ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಸರ್ಕಾರ ವಿಫಲವಾಗಿದ್ದೇಕೆ ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕು. ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಸರ್ಕಾರ ಕ್ಷಮೆ ಕೇಳಬೇಕು.
ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಮುಂದಾಗಿದೆ. ರಾಜ್ಯದ ಯುವಕರು ದುಡುಕಿ ಇಂತಹ ನಿರ್ಧಾರ ಕೈಗೊಳ್ಳಬೇಡಿ, ಮುಂದೆ ಕಾಂಗ್ರೆಸ್ ಪಕ್ಷ ನಿಮ್ಮ ಪರ ನಿಲ್ಲಲಿದೆ ಎಂದು ಭರವಸೆ ನೀಡುತ್ತೇನೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂಶುಲ್ ಮಾತನಾಡಿ,ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಕಂಗೆಟ್ಟಿದ್ದಾರೆ. ಜೇವರ್ಗಿಯ ನಿರುದ್ಯೋಗಿ ಯುವಕ ಸಿದ್ದು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಚಾರ. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ.
ಇಷ್ಟು ದಿನಗಳ ಕಾಲ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳನ್ನು ನೋಡುತ್ತಿದ್ದೆವು. ಆದರೆ ಈಗ ಉದ್ಯೋಗ ಸಿಗದ ಯುವಕರು ಕೂಡ ಆತ್ಮಹತ್ಯೆಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಈ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು.
ಕೆಲವು ವರ್ಷಗಳ ಹಿಂದೆ ಕರ್ನಾಟಕ ಉದ್ಯೋಗ ಸೃಷ್ಟಿಯ ಕೇಂದ್ರವಾಗಿತ್ತು. ಇದರಿಂದ ದೇಶದ ಆರ್ಥಿಕತೆಗೆ ಶಕ್ತಿ ತುಂಬಿತ್ತು. ಆದರೆ ಈಗ 1129 ಯುವಕರು ನಿರುದ್ಯೋಗದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜ್ಯ ಸರ್ಕಾರದ ವ್ಯಪ್ತಿಯಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನು ಈ ಬಿಜೆಪಿ ಸರ್ಕಾರ ಅವಧಿಯಲ್ಲಿ ನೇಮಕಾತಿ ಅಕ್ರಮಗಳು ಹೆಚ್ಚಾಗಿದ್ದು, ಅರ್ಜಿದಾರರ ಕನಸಿಗೆ ಕೊಳ್ಳಿ ಇಡಲಾಗಿದೆ. ಪ್ರತಿ ಹುದ್ದೆಯನ್ನು 70 ಲಕ್ಷದಿಂದ 1 ಕೋಟಿವರೆಗೂ ಲಂಚ ಪಡೆಯಲಾಗಿದೆ. ಸಹಾಯಕ ಪ್ರಾಧ್ಯಾಪಕರು, ಜೆಇಇ ಸೇರಿದಂತೆ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲೂ ಅಕ್ರಮಗಳು ನಡೆದಿವೆ.
ಇನ್ನು ಒಂದು ಕಾಲದಲ್ಲಿ ಬೆಂಗಳೂರು ನವೋದ್ಯಮಗಳ ರಾಜಧಾನಿಯಾಗಿತ್ತು. ಆದರೆ ಇಂದು ನವೋದ್ಯಮಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಇದಕ್ಕೆಲ್ಲ ಸರ್ಕಾರದ ನೀತಿ ವೈಫಲ್ಯಗಳೇ ಕಾರಣ. ಇನ್ನು ಎಂಎಸ್ಎಂಇ ಗಳು ನೋಟು ರದ್ದತಿ ನಂತರ ದೊಡ್ಡ ಹೊಡೆತ ಅನುಭವಿಸಿತು, ಕೋವಿಡ್ ನಂತರ ಇದು ಸಂಪೂರ್ಣವಾಗಿ ಕುಸಿಯಿತು. ಸರ್ಕಾರದ ಕೈಗಾರಿಕ ವಿರೋಧಿ ನೀತಿಗಳು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣವಾಗಿವೆ.
ನಿರುದ್ಯೋಗಿ ಯುವಕರ ಸಮಸ್ಯೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷ ಯುವನಿಧಿ ಯೋಜನೆ ಘೋಷಿಸಿದ್ದು, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1500 ರೂ. ನೀಡಲಾಗುವುದು. ಇನ್ನು ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು.
ಕಾಂಗ್ರಸ್ ಪಕ್ಷ ನುಡಿದಂತೆ ನಡೆಯುತ್ತದೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ. ಆದರೆ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ವಿಚಾರದಿಂದ ಪ್ರತಿ ಹಂತದಲ್ಲೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಬಿಜೆಪಿ ದುರಾಡಳಿತದಲ್ಲಿ 12.50 ಕೋಟಿ ಉದ್ಯೋಗಗಳು ನಷ್ಟವಾಗಿದ್ದು, ನಿರುದ್ಯೋಗ ಪ್ರಮಾಣ ಶೇ.20ಕ್ಕೆ ಏರಿದೆ.