ಸುದ್ದಿಮೂಲ ವಾರ್ತೆ
ಬೆಳಗಾವಿ,ಏ.24:ಗೋಕಾಕ ಜನ ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ, ಇದೇ ರೀತಿ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದಕ್ಕೆ ಕಾರಣ ರಾಜ್ಯದಲ್ಲಿರುವ ಜನವಿರೋಧಿ, ಭ್ರಷ್ಟ ಸರ್ಕಾರ, ಈ ಸರ್ಕಾರವನ್ನು ಬದಲಾವಣೆ ಮಾಡಿ ಮತ್ತೆ ಕಾಂಗ್ರೆಸ್ ಗೆ ಅಧಿಕಾರ ಕೊಡಬೇಕು ಎಂಬುದು ಜನರ ಅಭಿಲಾಷೆ. 2013ರಲ್ಲಿ ಕಾಂಗ್ರೆಸ್ ಗೆ ನೀವೆಲ್ಲ ಆಶೀರ್ವಾದ ಮಾಡಿ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟಾಗ ನಮ್ಮ ಸರ್ಕಾರದ 5 ವರ್ಷಗಳಲ್ಲಿ ಸಮಾಜದ ಎಲ್ಲಾ ಜಾತಿ, ಧರ್ಮಗಳ ಬಡವರಿಗೆ ಕಾರ್ಯಕ್ರಮವನ್ನು ನೀಡುವ ಪ್ರಯತ್ನ ಮಾಡಿದ್ದೆವು. ನಮ್ಮದು ನುಡಿದಂತೆ ನಡೆದ ಸರ್ಕಾರ. ನಾವು ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೆವು, ಇದನ್ನು ಯಾರು ಬೇಕಾದರೂ ಪರಿಶೀಲನೆ ಮಾಡಬಹುದಾಗಿದೆ ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹೇಳಿದರು.
ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಅನ್ನಭಾಗ್ಯ, ಕೃಷಿ ಭಾಗ್ಯ, ಶೂಭಾಗ್ಯ, ಪಶುಭಾಗ್ಯ, ಮೈತ್ರಿ, ಮನಸ್ವಿನಿ, ಇಂದಿರಾ ಕ್ಯಾಂಟೀನ್, ಶಾದಿಭಾಗ್ಯ, ಸಾಲಮನ್ನಾ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟು ಬಡವರ ಬದುಕನ್ನು ಹಸನಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ಆದರೆ ಬಿಜೆಪಿ ಪಕ್ಷ ರಾಜ್ಯದ ಜನರಿಗೆ ಕಳೆದ ಚುನಾವಣೆ ವೇಳೆಯಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ ಕೇವಲ 55 ಭರವಸೆಗಳನ್ನು ಮಾತ್ರ ಈಡೇರಿಸಿ ಜನರಿಗೆ ಮೋಸ ಮಾಡಿದೆ. ಇದರ ಜೊತೆಗೆ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕರ್ನಾಟಕ ಅನುದಾನಿತ ಶಿಕ್ಷಣ ಸಂಸ್ಥೆಗಳು (ರುಪ್ಸಾ) ದವರು ದೇಶದ ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ ನಾವು 40% ಕಮಿಷನ್ ಕೊಡಬೇಕಾಗಿದೆ, ಹಿಂದೆಂದೂ ಹೀಗೆ ಕಮಿಷನ್ ಕೇಳುವ ಸರ್ಕಾರ ಬಂದಿರಲಿಲ್ಲ ಎಂದು ಪತ್ರ ಬರೆದಿದ್ದರು. ರಾಜ್ಯದ ಇತಿಹಾಸದಲ್ಲಿ ಮೊಟ್ಟ ಬಾರಿಗೆ ಬಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ವಿರೋಧ ಇದ್ದರೆ ರಾಜ್ಯ ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು ಅಲ್ವಾ?
ಈ ಪ್ರಚಾರ ಸಭೆಯಲ್ಲಿ ಸಾಕಷ್ಟು ಜನ ಪಂಚಾಯತಿ ಸದಸ್ಯರಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿದೆಯಾ ಹೇಳಿ? ರಮೇಶ್ ಜಾರಕಿಹೊಳಿ ಬಹಳ ದೊಡ್ಡ ನಾಯಕರು, ಒಂದು ಮನೆ ಕೊಡಿಸಿದ್ರಾ? ನಾನು ಮುಖ್ಯಮಂತ್ರಿಯಾಗಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಇವರಿಂದ ಒಂದು ಮನೆ ಕೊಡೋಕಾಗಿಲ್ಲ. ನಾನು 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದ್ದೆ, ಬಿಜೆಪಿಯವರು ಅನ್ನಭಾಗ್ಯ ಕೇಂದ್ರ ಸರ್ಕಾರದ ಕಾರ್ಯಕ್ರಮ ಎಂದರು, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್ ನಲ್ಲಿ, ಉತ್ತರ ಪ್ರದೇಶದಲ್ಲಿ ಯಾಕಿಲ್ಲಪ್ಪ? ಹೀಗೆ ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಾರೆ. ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ ಇದ್ದ ಹಾಗೆ. ಅವರ ಸುಳ್ಳುಗಳಿಗೆ ಇತಿಮಿತಿಯೇ ಇಲ್ಲ. ಕೃಷಿಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ ಇಂದು ಇದೆಯಾ? ನಮ್ಮ ಸರ್ಕಾರ ನೀಡಿದ್ದ ಮನೆಗಳಿಗೆ ಇವರಿಗೆ ಬಿಲ್ ಕೊಡಲು ಸಾಧ್ಯವಾಗಿಲ್ಲ. ಇಂಥಾ ಬಡವರ ವಿರೋಧಿಗಳು ಇವರು.
ಗೋಕಾಕ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರನ್ನು ಬೆದರಿಸಿ ಭಯದ ವಾತಾವರಣ ನಿರ್ಮಾಣ ಮಾಡುವವರು ರಾಜಕೀಯದಲ್ಲಿ ಇರಬಾರದು. ಹಿಂದೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರವನ್ನು ಕಿತ್ತುಹಾಕಿದ್ದಾಗ ನಾನು ಇಲ್ಲಿಗೆ ಬಂದಿದ್ದೆ. 2018ರಲ್ಲಿ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದಿಂದ ಗೆದ್ದಿದ್ದರು. ಅಧಿಕಾರದ ಆಸೆಗಾಗಿ ಆಪರೇಷನ್ ಕಮಲಕ್ಕೆ ಒಳಗಾಗಿ, ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸೇರಿದರು ಆದರೂ ಇಂದು ಅವರಿಗೆ ಮಂತ್ರಿಯಾಗಿ ಉಳಿದುಕೊಳ್ಳಲು ಆಗಲಿಲ್ಲ. ಮಂತ್ರಿ ಹುದ್ದೆ ಹೋಗಿದ್ದು ಯಾಕೆ ಎಂದು ನಿಮಗೆಲ್ಲ ಗೊತ್ತಿಲ್ಲ, ಅದನ್ನು ನಾನು ಹೇಳಲು ಹೋಗಲ್ಲ. ನಾವು ನಿಮ್ಮ ಜೊತೆ ಇದ್ದೀವಿ, ನೀವ್ಯಾರು ಭಯಪಡುವ ಅಗತ್ಯವಿಲ್ಲ. ಅಶೋಕ್ ಪೂಜಾರಿಯವರು ಹೋರಾಟ ಮಾಡಿಕೊಂಡು ಬಂದವರು, ಇದು ಪ್ರಜಾಪ್ರಭುತ್ವ ಇಲ್ಲಿ ಯಾರೂ ಹೆದರಿಕೊಳ್ಳಬೇಕಾದ ಅಗತ್ಯವಿಲ್ಲ. ನೀವೆಲ್ಲ ಮುಕ್ತವಾದ ವಾತಾವರಣದಲ್ಲಿ ಮತ ನೀಡಿ ಭ್ರಷ್ಟರನ್ನು ಮನೆಗೆ ಕಳಿಸುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಈ ಬಾರಿ ಭಯಪಡದೆ ಮಹಾಂತೇಶ್ ಕಡಾಡಿ ಅವರಿಗೆ ಮತನೀಡಿ ಗೆಲ್ಲಿಸಿ, ನಿಮಗೆ ರಕ್ಷಣೆ ನೀಡಲು ನಾವು ನಿಮ್ಮ ಜೊತೆ ಇರುತ್ತೇವೆ.
ನಾವು ಮಾಡಿದ್ದ ಎಲ್ಲಾ ಕೆಲಸಗಳನ್ನು ಈ ಸರ್ಕಾರ ಹಾಳುಮಾಡಿದೆ. ಜಗದೀಶ್ ಶೆಟ್ಟರ್ ಅವರನ್ನು ಆಚೆ ತಳ್ಳಿದ್ದಾರೆ. ಇಂಥವರು ಯಾರಿಗೆ ರಕ್ಷಣೆ ಕೊಡುತ್ತಾರೆ? ಯಾರಿಗೆ ಗೌರವ ಕೊಡುತ್ತಾರೆ? ಯಡಿಯೂರಪ್ಪ ಅವರನ್ನು ಬಲವಂತದಿಂದ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಲ್ಲ. ಅವರನ್ನು ಕೂಡ ಹೆದರಿಸಿದ್ದಾರೆ. ಅವರ ಕಣ್ಣಲ್ಲಿ ನೀರು ಹಾಕಿಸಿದರು, ಆರ್,ಎಸ್,ಎಸ್ ನವರ ಕೈಗೊಂಬೆಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ್ರು. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು.
ನಿನ್ನೆ ಬಸವಣ್ಣನವರ ಜಯಂತಿ. ನಾವು ಬಸವಾದಿ ಶರಣರ ಹಾದಿಯಲ್ಲಿ ನಡೆಯುವವರು. ನಾನು ನಿನ್ನೆ ಸಂಗಮದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದೆ, ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಬೇಕು ಎಂದು ಆದೇಶ ಮಾಡಿದ್ದೆ, ಇದಕ್ಕೆ ಕಾರಣ ಬಸವಣ್ಣನವರು ನಾಡಿನ ಎಲ್ಲಾ ಮಂತ್ರಿಗಳಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮತ್ತು ಜನರಿಗೆ ಪ್ರೇರಣೆಯಾಗಬೇಕು ಎಂಬುದಾಗಿತ್ತು. ಬಸವಣ್ಣನವರು ಹೇಗೆ ನುಡಿದಂತೆ ನಡೆದಿದ್ದರು, ಸಮಸಮಾಜದ ಕನಸು ಕಂಡಿದ್ದರು ಅದಕ್ಕೆ ಎಳ್ಳು ನೀರು ಬಿಟ್ಟಿರುವವರು ಬಿಜೆಪಿಯವರು. ಇಂಥವರು ಬಸವಣ್ಣನವರ ಬಗ್ಗೆ ಬರೀ ಮಾತುಗಳನ್ನಾಡುತ್ತಾರೆ, ಅವರ ವಿಚಾರಗಳನ್ನು ಜಾರಿಗೆ ತರುವುದಿಲ್ಲ.
ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ನಮಗೆ ಇನ್ನೊಂದು ಅವಕಾಶ ಮಾಡಿಕೊಡಿ. ಇನ್ನು ಒಂದೆರೆಡು ದಿನದಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆಯಾಗುತ್ತದೆ. ಇದರಲ್ಲಿ ನಾವು 4 ಪ್ರಮುಖ ಭರವಸೆಗಳನ್ನು ನೀಡಿದ್ದೇವೆ. ಪ್ರತೀ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ, ಬಡವರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಎಲ್ಲಾ ಪದವೀಧರ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3000 ರೂಪಾಯಿ ನೀಡುತ್ತೇವೆ. ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1500 ರೂಪಾಯಿ ನೀಡುತ್ತೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ನಂತರ ರೈತರಿಗೆ 5 ಲಕ್ಷದ ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುತ್ತೇವೆ.
ಮಹಾಂತೇಶ್ ಕಡಾಡಿ ಗೆದ್ದ ನಂತರ ಇನ್ನೊಮ್ಮೆ ನಿಮಗೆ ಧನ್ಯವಾದ ತಿಳಿಸಲು ಬರುತ್ತೇನೆ. ನೀವು ಭಯವನ್ನು ಬಿಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಭಯಪಡಬೇಕಾದ ಅಗತ್ಯವಿಲ್ಲ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮಹಾಂತೇಶ್ ಕಡಾಡಿ ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡುತ್ತೇನೆ