ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.24: ರಾಜ್ಯ ಸರ್ಕಾರ 40 ಪರ್ಸೆಂಟ್ ಭ್ರಷ್ಟಾಚಾರದ ವಿಷಯ ಎತ್ತಿದಾಗಲೆಲ್ಲಾ ಸಾಕ್ಷಿ ಕೇಳುತ್ತಿತ್ತು. ಆದರೆ, ಲೋಕಾಯುಕ್ತ ದಾಳಿ ವೇಳೆ ಬಿಬಿಎಂಪಿ ಸಹಾಯಕ ನಿರ್ದೇಶಕನ ಮನೆಯಲ್ಲಿ ಕೋಟಿ ಕೋಟಿ ನಗದು ಆಸ್ತಿ ಪತ್ತೆಯಾಗಿದೆ. ಇದಕ್ಕಿಂತ ಸಾಕ್ಷಿ ಬೇಕೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಂದು ಭ್ರಷ್ಟಾಚಾರ ನಡೆದಿದ್ದು ಇದು ಆಘಾತಕಾರಿಯಾಗಿದೆ. ಬಿಬಿಎಂಪಿಯ ಸಹಾಯಕ ನಿರ್ದೇಶಕ ಮಟ್ಟದ ಅಧಿಕಾರಿ ಬಳಿ ಕೋಟ್ಯಂತರ ಹಣ, ಆಭರಣ, ಆಸ್ತಿಪಾಸ್ತಿಗಳು ಲಭ್ಯವಾಗಿವೆ. ಈ ಅಧಿಕಾರಿ ಬಳಿ ಬೆಂಗಳೂರಿನಲ್ಲಿ 12 ಫ್ಲಾಟ್, ನೆಲಮಂಗಲದಲ್ಲಿ 5 ಎಕರೆ ಜಮೀನು, ಮಲ್ಲೇಶ್ವರದಲ್ಲಿ ಮೂರು ನಿವೇಶನ, 1 ಕೋಟಿ ಮೌಲ್ಯದ ಚಿನ್ನ ವಜ್ರಗಳು, 1.44 ಕೋಟಿ ನಗದು ಇದೆ ಎಂದು ವಿವರಿಸಿದರು.
ಇದು 40 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರಕ್ಕೆ ಸಾಕ್ಷಿ. ಈ ಅಧಿಕಾರಿ ಇಷ್ಟೊಂದು ಭ್ರಷ್ಟಾಚಾರ ಮಾಡಲು ಧೈರ್ಯ ಬಂದಿದ್ದು ಹೇಗೆ. ಬಿಬಿಎಂಪಿ ಉಸ್ತುವಾರಿ ಯಾರು ಎಂದರೆ ಗೊತ್ತಾಗುತ್ತದೆ. 40 ಪರ್ಸೆಂಟ್ ಭ್ರಷ್ಟಾಚಾರದ ಮುಖ್ಯಸ್ಥರೆ ಬಿಬಿಎಂಪಿ ಉಸ್ತುವಾರಿಯಾಗಿದ್ದಾರೆ. ಈಗ ಈ ಪ್ರಕರಣವೇ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.
ಇದುವರೆಗೂ ಬೆಂಗಳೂರಿನ ಅಭಿವೃದ್ಧಿ, ಐಟಿ ಹಬ್, ನೋಡಿದರೆ ಎಲ್ಲರೂ ಹೆಮ್ಮೆ ಪಟ್ಟು, ದೇಶದ ಜನ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಹಾಲಿ ಸರ್ಕಾರ ಬೆಂಗಳೂರನ್ನು ಹಣ ಗಳಿಕೆಗೆ ಬಳಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ದಿಮೆದಾರರು ಬೆಂಗಳೂರಿನಲ್ಲಿ ವ್ಯಾಪಾರ ಮಾಡಲು ಬರಲು ಹೇಗೆ ಸಾಧ್ಯ?
ಈ ಅಧಿಕಾರಿಗಳು ಇಷ್ಟೊಂದು ಭ್ರಷ್ಟಾಚಾರ ನಡೆಸಲು ಧೈರ್ಯ ಹೇಗೆ ಬರುತ್ತದೆ? ಯಾವಾಗ ಸರ್ಕಾರದ ಮುಖ್ಯಸ್ಥರೇ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾರೋ ಆಗ ಈ ರೀತಿ ಆಗುತ್ತದೆ. ಇದು ರಾಜ್ಯದಲ್ಲಿ ಸರ್ಕಾರ 40 ಪರ್ಸೆಂಟ್ ಜಾರಿ ಮಾಡಿರುವುದಕ್ಕೆ ಸಾಕ್ಷಿ. ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯಲು ಸಿದ್ಧವಾಗಿದ್ದು, ಚುನಾವಣೆ ಸಮಯದಲ್ಲೂ ನಾವು ಇಂತಹ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ ಎಂದರು.
ಸಹಾಯಕ ನಿರ್ದೆಶಕ ಅಧಿಕಾರಿಯೇ ಇಷ್ಟೋಂದು ಭ್ರಷ್ಟಾಚಾರ ಮಾಡಬಹುದಾದರೆ, ಇನ್ನು ಸರ್ಕಾರದ ಉನ್ನತ ಹಂತದಲ್ಲಿರುವವರು ಇನ್ನೆಷ್ಟು ಭ್ರಷ್ಟಾಚಾರ ಮಾಡಬಹುದು ಎಂದು ಊಹಿಸಿ. ಇದು ನಮ್ಮೆಲ್ಲರಿಗೂ ಆಘಾತಕಾರಿ ವಿಚಾರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತದೆ ಎಂದು ಹೇಳಿದರು.
ಪ್ರತಿ ನಿತ್ಯ ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ಅಕ್ರಮ ಹಣ ಹಂಚುತ್ತಿರುವಾಗ ಕೇಂದ್ರ ತನಿಖಾ ಸಂಸ್ಥೆಗಳು ಯಾಕೆ ಮೌನವಾಗಿವೆ? ರಾಜ್ಯದ ಹಣವನ್ನು ಸರ್ಕಾರ ಲೂಟಿ ಮಾಡಿದ್ದು, ಅದೇ ಹಣದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದು, ಈ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಈ ಸರ್ಕಾರ ಅಷ್ಟು ಭ್ರಷ್ಟವಾಗಿದೆ, ಕರ್ನಾಟಕ ರಾಜ್ಯ ಹಿಂದೆದೂ ಇಂತಹ ಭ್ರಷ್ಟಾಚಾರ ಕಂಡಿರಲಿಲ್ಲ. ಹೀಗಾಗಿ ರಾಜ್ಯದ ಜನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.