ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.25: ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಬಿಬಿಎಂಪಿಯ ನಗರ ಯೋಜನಾ ವಿಭಾಗದ ಯಲಹಂಕ ವಲಯ ಕಚೇರಿಯ ಸಹಾಯಕ ನಿರ್ದೇಶಕ (ಎಡಿಟಿಪಿ) ನಾಗರಾಜ್ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಶೋಧ ನಡೆಸಿ ಕೋಟಿ ಕೋಟಿ ನಗದು ವಶಪಡಿಸಿಕೊಮಡಿದ್ದಾರೆ.
ಸಹಾಯಕ ನಿರ್ದೇಶಕ ಮಟ್ಟದ ಅಧಿಕಾರಿ ಬಳಿ ಕೋಟ್ಯಂತರ ಹಣ, ಆಭರಣ, ಆಸ್ತಿಪಾಸ್ತಿಗಳು ಲಭ್ಯವಾಗಿವೆ. ಈ ಅಧಿಕಾರಿ ಬಳಿ ಬೆಂಗಳೂರಿನಲ್ಲಿ 12 ಫ್ಲಾಟ್, ನೆಲಮಂಗಲದಲ್ಲಿ 5 ಎಕರೆ ಜಮೀನು, ಮಲ್ಲೇಶ್ವರದಲ್ಲಿ ಮೂರು ನಿವೇಶನ, 1 ಕೋಟಿ ಮೌಲ್ಯದ ಚಿನ್ನ ವಜ್ರಗಳು, 1.44 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಾಗರಾಜ್ ವಿರುದ್ಧ ಲೋಕಾಯುಕ್ತ ನಗರ ಪೊಲೀಸ್ ಘಟಕ ಪ್ರಕರಣ ದಾಖಲಿಸಿದೆ.
ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಿವೃತ್ತ ಡಿಸಿಎಫ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಅವರ ಶಿಕಾರಿಪುರದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.
ನಿವೃತ್ತ ಡಿಸಿಎಫ್ ನಾಗರಾಜ್ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ಇಬ್ಬರು ಅಧಿಕಾರಿಗಳ ಏಳು ಸ್ಥಳಗಳ ಮೇಲೆ ಏಕ ಕಾಲಕ್ಕೆ ರೇಡ್ ಆಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.
ಬಾಕ್ಸ್…
ಬಂಗಾರಪೇಟೆಯಲ್ಲಿ ಇಓ ವೆಂಕಟೇಶಪ್ಪ ಡ್ರಾಮಾ
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ ಅವರ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಈ ವೇಳೆ ವೆಂಕಟೇಶಪ್ಪ ಹೈಡ್ರಾಮಾ ಮಾಡಿದ್ದಾರೆ.
ಬಂಗಾರಪೇಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವೆಂಕಟೇಶಪ್ಪ ಅವರ ಮನೆ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಇಓ ವೆಂಕಟೇಶಪ್ಪ ಮನೆಯಲ್ಲಿ ಇಲ್ಲದೆ ಕರ್ತವ್ಯದ ಮೇರೆಗೆ ಬಾಗೇಪಲ್ಲಿಗೆ ಹೋಗಿದ್ದರು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಇಓ ವೆಂಕಟೇಶಪ್ಪ ಬಂಗಾರಪೇಟೆಯ ಮನೆಗೆ ಬಂದಿದ್ದು, ಈ ವೇಳೆ ಅಧಿಕಾರಿಗಳ ಮುಂದೆ ಬಿದ್ದು ಅಯ್ಯಯ್ಯೋ, ಅಯ್ಯಯ್ಯೋ ಎಂದು ಒದ್ದಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ.
ವೆಂಕಟೇಶಪ್ಪ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ದಾಳಿಗೆ ಬಂದಿದ್ದ ಅಧಿಕಾರಿಗಳೇ ಆಂಬುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಗರದಲ್ಲಿ ಮೂರು ಕಡೆ ಹಾಗೂ ಮುಳಬಾಗಿಲು ತಾಲ್ಲೂಕಿನ ತಿಪ್ಪದೊಡ್ಡಿಯಲ್ಲಿ ಎರಡು ಕಡೆ, ಒಟ್ಟು ವೆಂಕಟೇಶಪ್ಪ ಅವರಿಗೆ ಸೇರಿದ ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆ ತಾಲ್ಲೂಕು ಪಂಚಾಯತ್ ಇಓ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶಪ್ಪ ಅವರಿಗೆ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ವರ್ಗಾವಣೆಯಾಗಿತ್ತು. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.