ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.25: ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ಯಾಲೇಸ್ ಗುಟ್ಟಹಳ್ಳಿ ಮತ್ತು ಮಲ್ಲೇಶ್ವರದ 11ನೇ ಅಡ್ಡರಸ್ತೆಯಲ್ಲಿ ನಡೆದ ಶ್ರೀ ರಾಮಾನುಜ ಜಯಂತಿ ಮತ್ತು ಶ್ರೀ ಶಂಕರ ಜಯಂತಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಅಭ್ಯರ್ಥಿಯೂ ಆದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮಂಗಳವಾರ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಧ್ಯಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಸಂಸದ ವಿ.ಡಿ. ಶರ್ಮಾ ಜತೆಗಿದ್ದರು.
ಎರಡೂ ಕಡೆಗಳಲ್ಲಿ ಋತ್ವಿಜರ ಮತ್ತು ವಿಪ್ರ ಬಂಧುಗಳ ವೇದಘೋಷಗಳನ್ನು ತುಸು ಹೊತ್ತು ಆಲಿಸಿದ ಅವರು, ಬಳಿಕ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಮಾಲಾರ್ಪಣೆಯ ಗೌರವ ಸಲ್ಲಿಸಿ, ನಮಿಸಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ರಾಮಾನುಜ ನಾರಾಯಣ ಜೀಯರ್ ಅವರು ಸಚಿವರಿಗೆ ಪುಷ್ಪಮಾಲೆ ಹಾಕಿ, ಫಲ-ತಾಂಬೂಗಳನ್ನು ನೀಡಿ, ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅನೌಪಚಾರಿಕವಾಗಿ ಮಾತನಾಡಿದ ಅವರು, “ದೇಶದ ಸಂಸ್ಕೃತಿ, ಧರ್ಮ ಸಂರಕ್ಷಣೆ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ಕೊಡುಗೆ ಅಪಾರವಾಗಿದೆ. ಬಿಜೆಪಿ ಕೂಡ ನಮ್ಮತನದ ಸಂಸ್ಕೃತಿಗೆ ಒತ್ತು ಕೊಟ್ಟು, ಅಭಿವೃದ್ಧಿಕೇಂದ್ರಿತ ರಾಜಕಾರಣವನ್ನು ಇದರೊಂದಿಗೆ ಸಮ್ಮಿಳಿತಗೊಳಿಸಿದೆ. ಆಚಾರ್ಯರ ತತ್ತ್ವಗಳು ಮತ್ತು ಮೌಲ್ಯಗಳು ಕರ್ನಾಟಕ ಹಾಗೂ ಭಾರತವನ್ನು ಮುನ್ನಡೆಸುತ್ತಿದ್ದು, ಇಬ್ಬರೂ ಮಹಾಪುರುಷರ ಹೆಜ್ಜೆಗುರುತುಗಳು ಕರ್ನಾಟಕದಲ್ಲಿವೆ” ಎಂದರು.
ಎರಡೂ ಕಡೆಗಳಲ್ಲಿ ನೂರಾರು ವಿಪ್ರ ಬಂಧುಗಳು ಉಪಸ್ಥಿತರಿದ್ದರು. ಅಶ್ವತ್ಥನಾರಾಯಣ ಅವರು ಅವರೆಲ್ಲರೊಂದಿಗೂ ವಿಚಾರ ವಿನಿಮಯ ನಡೆಸಿದರು.