ಸುದ್ದಿಮೂಲ ವಾರ್ತೆ
ಬೆಂಗಳೂರು,(ಮತ್ತೀಕೆರೆ)ಏ.25: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮತ್ತೀಕೆರೆಯ ಸಂಜೀವಪ್ಪ ಕಾಲೋನಿ ಮತ್ತು ಜಯರಾಂ ಕಾಲೋನಿಗಳಲ್ಲಿ ಮಂಗಳವಾರ ಪಾದಯಾತ್ರೆ ಮಾಡಿ, ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡುವಂತೆ ಮತದಾರರನ್ನು ಕೋರಿದರು.
ಬೆಳಿಗ್ಗೆ ಬಿಸಿಲೇರುವ ಮೊದಲೇ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸ್ಥಳೀಯ ಮುಖಂಡರ ಜತೆ ಕಾಲೋನಿಯ ಬೀದಿಗಳಲ್ಲಿ ಪ್ರತ್ಯಕ್ಷರಾದ ಅವರನ್ನು ನೋಡಲು, ಇಕ್ಕೆಲಗಳಲ್ಲೂ ಜನರು ಸಾಲುಗಟ್ಟಿ ನಿಂತಿದ್ದರು. ಜತೆಗೆ ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಬಿಜೆಪಿಗೆ ಜಯವಾಗಲಿ ಎನ್ನುವ ಘೋಷಗಳನ್ನು ಮೊಳಗಿಸುತ್ತ, ಅಶ್ವತ್ಥನಾರಾಯಣ ಅವರಿಗೆ ಅಭಿಮಾನದಿಂದ ಹೂಮಳೆಗರೆದು, ಆರತಿ ಎತ್ತಿ, ಹರಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ ಅವರು, “ಸಂಜೀವಪ್ಪ ಮತ್ತು ಜಯರಾಂ ಕಾಲೋನಿಗಳಲ್ಲಿ ವಸತಿ ಸೌಲಭ್ಯ, ಶಾಲೆ, ರಸ್ತೆ, ಪಿಂಚಣಿ, ಪಡಿತರ ಚೀಟಿ, ಗುಣಮಟ್ಟದ ಆಸ್ಪತ್ರೆ ಎಲ್ಲವನ್ನೂ ಒದಗಿಸಿ ಕೊಡಲಾಗಿದೆ. ಈ ಮೂಲಕ ದುರ್ಬಲ ವರ್ಗಗಳ ಮತ್ತು ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣವನ್ನು ಸಾಧಿಸಲಾಗಿದೆ. ಮುಂಬರುವ ಚುನಾವಣೆಯಲ್ಲೂ ಇಲ್ಲಿನ ಮತದಾರರು ಬಿಜೆಪಿಗೆ ಬೆಂಬಲ ನೀಡಬೇಕು” ಎಂದು ಮನವಿ ಮಾಡಿಕೊಂಡರು.
ಮಲ್ಲೇಶ್ವರಂ ಕ್ಷೇತ್ರದಲ್ಲಿ ಈಗಾಗಲೇ ಶೇಕಡ 95ರಷ್ಟು ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಈ ಮೂಲಕ ಕ್ಷೇತ್ರವು ಮಾದರಿಯಾಗಿ ಹೊರಹೊಮ್ಮಿದೆ. ಉಳಿದಿರುವ ಸಣ್ಣಪುಟ್ಟ ಕೆಲಸಗಳನ್ನು ಕೂಡ ಮುಂಬರುವ ದಿನಗಳಲ್ಲಿ ಮಾಡಲಾಗುವುದು. ಸಂಜೀವಪ್ಪ ಕಾಲೋನಿ ಮತ್ತು ಜಯರಾಂ ಕಾಲೋನಿಗಳು ಕಿರಿದಾದ ಪ್ರದೇಶಗಳಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಇಲ್ಲಿನ ಜನರ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದು ಅವರು ವಿವರಿಸಿದರು.
ಸಂಜೀವಪ್ಪ ಕಾಲೋನಿಯ ಜನರಿಗೆ ಸಮೀಪದ ನೇತಾಜಿ ವೃತ್ತದಲ್ಲಿ ನಮ್ಮ ಕ್ಲಿನಿಕ್ ಮೂಲಕ ಉಚಿತವಾದ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಇಲ್ಲಿನ ಶಾಲೆಯನ್ನು ಕೂಡ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ಕಾಲೋನಿಗಳಲ್ಲಿ ಇಂತಹ ಅಭಿವೃದ್ಧಿ ಕಳೆದ ಐವತ್ತು ವರ್ಷಗಳಲ್ಲಿ ಎಂದೂ ಆಗಿರಲಿಲ್ಲ ಎಂದು ಅವರು ನುಡಿದರು.
ಪಾದಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಕೂಡ ಉತ್ಸಾಹದಿಂದ ಹೆಜ್ಜೆ ಹಾಕಿದರು. ಅಶ್ವತ್ಥನಾರಾಯಣ ಅವರು ಅಲ್ಲಲ್ಲಿ ನಿಂತುಕೊಂಡು, ಮತದಾರರ ಅಭಿಪ್ರಾಯಗಳನ್ನು ಆಲಿಸಿದ್ದು ಗಮನಾರ್ಹವಾಗಿತ್ತು.