ಸುದ್ದಿಮೂಲ ವಾರ್ತೆ
ಕೊಪ್ಪಳ,ಏ.25: ಮೇ 10ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ನೌಕರರು ಮತ್ತು ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಸುಧಾ ಗರಗ ತಿಳಿಸಿದರು.
ತಾಲೂಕ ಸ್ವೀಪ್ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ಗಿಣಿಗೇರಾ ಗ್ರಾಮ ಪಂಚಾಯತಿಯಿಂದ ಗಿಣಿಗೇರಾ ಗ್ರಾಮದ ಹತ್ತಿರ ಕಲ್ಯಾಣಿ ಸ್ಟೀಲ್ಸ್ ಪ್ಯಾಕ್ಟರಿ ನೌಕರರು ಮತ್ತು ಕಾರ್ಮಿಕರಿಗೆ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಿಣಿಗೇರಾ ಗ್ರಾಮದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ನಾನಾ ರೀತಿಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ಕಲ್ಪಿಸಿರುವ ವಿಶೇಷ ಹಾಗೂ ಅಮೂಲ್ಯ ಹಕ್ಕಾಗಿದೆ. ಅದನ್ನು ವಿವೇಚನಾಯುಕ್ತವಾಗಿ ಅರ್ಹರಿಗೆ ಕಡ್ಡಾಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದು ತಿಳಿಸಿದರು.
18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತ್ತು ನೈತಿಕ ಹಾಗೂ ವಿವೇಚನಾಯುಕ್ತವಾಗಿ ಮತಚಲಾಯಿಸಬೇಕು. ಮೇ-10ರಂದು ಮತದಾನ ಮಾಡಲು ಎಲ್ಲಾ ನೌಕರರು ಹಾಗೂ ಕಂಪನಿಯವರಿಗೆ ಕೆಲಸದಿಂದ ವಿನಾಯಿತಿ ನೀಡಿ ಚುನಾವಣಾ ಆಯೋಗ ಆದೇಶಿಸಿದ್ದು ಮತದಾನದಿಂದ ಹೊರಗುಳಿಯದಂತೆ ಮನವಿ ಮಾಡಿದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಮಹೇಶ್ ಎಚ್ ಅವರು ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕ ಪಂಚಾಯತಿಯ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಎಚ್, ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಜಿಲ್ಲಾ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಬಸವರಾಜ ಗೌಡರ, ಗ್ರಾಮ ಪಂಚಾಯತ ಪಿಡಿಓ ಮಂಜುಳಾ ಹೂಗಾರ, ತಾಲೂಕ, ಜಿಲ್ಲಾ ಎಸ್ಬಿಎಂ ಸಮಾಲೋಚಕಿ ಬಸಮ್ಮ ಹುಡೇದ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ಸ್ವೀಪ್ ತಂಡದ ಸದಸ್ಯರಾದ ಬಸವರಾಜ ಬಳಿಗಾರ, ಪೂರ್ಣೆಂದ್ರಸ್ವಾಮಿ, ಪ್ಯಾಕ್ಟರಿಯ ಮಾನವ ಸಂಪನ್ಮೂಲ ವಿಭಾಗದ ದುಗ್ಗಪ್ಪ, ಸನಾವುಲ್ಲಾ ನಧಾಫ್, ಮಹೇಶ ನಾಯಕ, ರಮೇಶ ದೇಸಾಯಿ, ಕಾರ್ಯದರ್ಶಿ ಮಂಜುನಾಥ ಅಂಗಡಿ, ಕರವಸೂಲಿಗಾರ ಈಶ್ವರಯ್ಯ ಪೋಲಿಸ್ ಪಾಟೀಲ್, ಸಿಬ್ಬಂದಿ ಡಿಇಒ ರಾಜಭಕ್ಷಿ, ರಾಜು, ಗ್ರಾಮ ಪಂಚಾಯತ ಸಿಬ್ಬಂದಿ ಹಾಜರಿದ್ದರು.
ಅಣುಕು ಮತದಾನ: ಕಾರ್ಖಾನೆ ಆವರಣದಲ್ಲಿ ನೌಕರರು ಮತ್ತು ಕಾರ್ಮಿಕರಿಗೆ ಇವಿಎಂ, ವಿವಿಪ್ಯಾಟ್ ಬಗ್ಗೆ ತಿಳಿಸಲಾಯಿತು. ಅಣುಕು ಮತದಾನದಲ್ಲಿ ಭಾಗಿಯಾಗಿ ನೌಕರರು ಮತ್ತು ಕಾರ್ಮಿಕರು ಖುಷಿಪಟ್ಟರು.