ಸುದ್ದಿಮೂಲ ವಾರ್ತೆ
ನವದೆಹಲಿ, ಏ.26: ಕರ್ನಾಟಕದಲ್ಲಿ ಅಲ್ಪಸಂಖ್ಯಾತರ (2ಬಿ) ಶೇ4ರಷ್ಟು ಮೀಸಲಾತಿಯನ್ನು ಕಿತ್ತು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿದೆ.
ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು, ಆ ವರ್ಗದವನರನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯೂಸ್) ವರ್ಗಾಯಿಸಿರುವ ಕರ್ನಾಟಕ ಸರ್ಕಾರದ ಆದೇಶವನ್ನು ಮೇ 9ರವರೆಗೂ ಜಾರಿಗೊಳಿಸಕೂಡದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಮೂಲಕ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಎದೆಯುಬ್ಬಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದವರಿಗೆ ಈಗ ಕೊಂಚಮಟ್ಟಿಗೆ ನಿರಾಸೆ ಮೂಡಿದೆ. ಈ ಮಧ್ಯೆ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಚಾಟಿ ಬೀಸಿರುವುದನ್ನು ಪ್ರತಿಪಕ್ಷಗಳು ಸ್ವಾಗತಿಸಿ, ಬಿಜೆಪಿ ವಿರುದ್ಧ ತಿರುಗಿ ಬಿದ್ದಿವೆ.
ರಾಜ್ಯ ಸರ್ಕಾರ ಮುಸ್ಲಿಮರ 2ಬಿ ಮೀಸಲಾತಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಕೆ. ಜೋಸೆಫ್ ನೇತೃತ್ವದ ಪೀಠ ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿದ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಿದೆ.
ಕರ್ನಾಟಕ ಸರ್ಕಾರದ ವಿವಾದಾತ್ಮಕ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ನಡೆ “ಖಂಡಿತವಾಗಿಯೂ ತರ್ಕಬದ್ಧವಲ್ಲದ ಗ್ರಹಿಕೆ”ಯ ಆಧಾರದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಸುಮಾರು ಮೂರು ದಶಕಗಳ ಹಿಂದೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮುಸ್ಲಿಮರಿಗೆ ಶೇ 4ರ ಮೀಸಲಾತಿ ನೀಡಲಾಗಿತ್ತು. ಈಗ ಅದನ್ನು ಏಕಾಏಕಿ ರದ್ದುಗೊಳಿಸಿದ ಕರ್ನಾಟಕದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ವಿವಾದಾತ್ಮಕ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದೆ.
ಮುಸ್ಲಿಮರ ಶೇ 4ರ ಒಬಿಸಿ ಕೋಟಾ ರದ್ದುಪಡಿಸಿ ಅದನ್ನು ಒಕ್ಕಲಿಗರು ಹಾಗೂ ಲಿಂಗಾಯತರ ಮೀಸಲಾತಿ ಪ್ರಮಾಣದಲ್ಲಿ ತಲಾ ಶೇ 2ರಷ್ಟು ಹೆಚ್ಚಿಸುವ ನಿರ್ಧಾರವು ಮೇಲ್ನೋಟಕ್ಕೆ ಅಸ್ಥಿರ ಹಾಗೂ ದೋಷಪೂರಿತ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂಪುಟ ಸಭೆಯಲ್ಲಿ ನಿರ್ಧಾರವಾಗಿತ್ತು:
ಮಾ.24 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಸ್ಲಿಮರ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರ ಮೀಸಲಾತಿಯಲ್ಲಿ ತಲಾ ಶೇ.2ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಬಳಿಕ ಇದಕ್ಕೆ ಸರ್ಕಾರಿ ಆದೇಶ ಸಹ ಮಾಡಲಾಗಿತ್ತು.
ಈಗ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ತಲಾ ಶೇ.2ರಷ್ಟು ಮೀಸಲಾತಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.