ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಏ.26: ಕಳೆದ ಹತ್ತು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಅಭಿವೃದ್ಧಿಯ ವಿಕಾಸ ಬೇಕಾ ಅಥವಾ ಸುನಾಮಿಯ ವಿನಾಶ ಬೇಕಾ ಎಂಬಯದನ್ನು ಕ್ಷೇತ್ರದ ಮತದಾರರು ತೀರ್ಮಾನಿಸಬೇಕಾದ ಕಾಲ ಕೂಡಿ ಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಗರದ ವಾಪಸಂದ್ರದಿಂದ ಪ್ರಚಾರ ಆರಂಭಿಸಿದ ಅವರು ಮಾತನಾಡಿ, ನಾನು ಶಾಸಕನಾದ ನಂತರ ನಗರಕ್ಕೆ ನೀರಿನ ತೊಂದರೆಯೇ ಬರದಂತೆ ನೋಡಿಕೊಳ್ಳಲಾಗಿದೆ. ಸತತ 10 ವರ್ಷದಿಂದ ನಗರದಲ್ಲಿ ಕುಡಿಯುವ ನೀರಿನ ತೊಂದರೆಯಾಗಿಲ್ಲ, ಶುದ್ಧ ನೀರು ಎಲ್ಲರಿಗೂ ಸಿಗಬೇಕು ಎಂಬ ಉದ್ಧೇಶದಿಂದ ನಗರದಾದ್ಯಂತ ಶುದ್ಧ ನೀರಿನ ಘಟಕಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಕೋವಿಡ್ ವೇಳೆ ಬಾರದವರು 15 ದಿನದಿಂದ ಬರುತ್ತಿದ್ದಾರೆ ಕಳೆದ 15 ದಿನದಿಂದ ಬರುತ್ತಿರುವ ವಿರೋಧ ಪಕ್ಷದವರು ಕಾಲಿಗೆ ಬಿದ್ದು, ಕಣ್ಣೀರು ಹಾಕುವ ಮೂಲಕ ಮತ ಕೇಳುತ್ತಿದ್ದಾರೆ. ಶಾಸಕನಾಗಲು ಸ್ವಾರ್ಥ ಏನಿದೆ, ಶಾಸಕ ಸ್ಥಾನ ಎಂಬುದು ಯಾರ ತಾತನ ಆಸ್ತಿ ಅಲ್ಲ, ಸೇವೆ ಮಾಡಲು ಒಂದು ಸ್ಥಾನಮಾನ ಅಷ್ಟೇ, ಇದಕ್ಕೆ ಕಣ್ಣೀರು ಹಾಕುವುದು ಯಾಕೆ, ಜನರು ಆಶೀರ್ವಾದ ಮಾಡಿದರೆ ಸೇವೆ, ಇಲ್ಲವಾದರೆ ಇಲ್ಲ. ಈ ಸತ್ಯವನ್ನು ಅರಿಯದವರು ಬೇಕಾ ಎಂದು ಪ್ರಶ್ನಿಸಿದರು.
ಶಾಸಕನಾಗಲು ಲಾಭ ನಷ್ಟದ ಲೆಕ್ಕಾಚಾರದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಇವರು ನಾಯಕರಾಗಲು ಸಾಧ್ಯವಿಲ್ಲ. ನಾಯಕನಾದವನು ಬಡವರ ಕಣ್ಣೀರು ಒರೆಸಬೇಕು, ತಾವೇ ಕಣ್ಣೀರು ಹಾಕಬೇಕಾದ ಅಗತ್ಯವಿಲ್ಲ ಎಂದರಲ್ಲದೆ ಪ್ರತಿಯೊಬ್ಬರಿಗೂ ಆರೋಗ್ಯ ಸಿಗಬೇಕು. ಎಂಬ ಕಾರಣಕ್ಕೆ ಮೊಬೈಲ್ ಕ್ಲಿನಿಕ್ಗಳನ್ನು ಹಾಕಿದ್ದರೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನಿಲ್ಲಿಸಿದ್ದಾರೆ. 15 ದಿನಗಳ ನಂತರ ಮನೆ ಮನೆಗೆ ಬಂದು ಶಾಂತಾ ಕ್ಲಿನಿಕ್ ಚಿಕಿತ್ಸೆ ನೀಡಲಿದೆ ಎಂದರು.
ಜನರಿಗೆ ಆರೋಗ್ಯ ನೀಡುವುದು ನಮ್ಮ ಜವಾಬ್ದಾರಿ ಎಂದು ಇವನ್ನು ಮಾಡಿದ್ದೇವೆ. ಈವರೆಗೆ ನಗರ ಪ್ರದೇಶದ ಜನರಿಗೆ ನಿವೇಶನ ನೀಡಿದ ಉದಾಹರಣೆಯೇ ಇಲ್ಲ. ಇಂದು ಹಕ್ಕುಪತ್ರ ನೀಡಲಾಗಿದೆಯಲ್ಲ, ಸರ್ವೇ ನಂಬರ್ ಸಮೇತ ಇದನ್ನು ನೋಡುವಂತೆ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಕ್ಷೇತ್ರದಲ್ಲಿ ಒಟ್ಟು 23 ಸಾವಿರ ಬಡವರಿಗೆ ಉಚಿತ ನಿವೇಶನ ನೀಡಲಾಗಿದೆ, ಇದರಲ್ಲಿ 11 ಸಾವಿರ ಹಕ್ಕು ಪತ್ರ ಈಗಾಗಲೇ ನೀಡಲಾಗಿದೆ ಎಂದ ಸಚಿವರು ನಗರಸಭೆಯ ವ್ಯಾಪ್ತಿಯಲ್ಲಿ 4 ಸಾವಿರ ಹಕ್ಕುಪತ್ರ ಈಗಾಗಲೇ ವಿತರಿಸಲಾಗಿದೆ, ಇನ್ನೂ ಹೆಚ್ಚುವರಿಯಾಗಿ ನಿವೇಶನಗಳಿದ್ದು, ನಿವೇಶನ ರಹಿತರಿದ್ದರೆ ಈಗಲೂ ಅರ್ಜಿ ಸಲ್ಲಿಸಬಹುದು, ಅರ್ಹರಿದ್ದರೆ ನಿವೇಶನ ನೀಡಲಾಗುವುದು. ಕೇವಲ ನಿವೇಶನ ಮಾತ್ರ ನೀಡಿ ಸುಮ್ಮನಾಗುವುದಲ್ಲ, ಅವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ಮುಸ್ಲಿಂರಿಗೆ 1,800 ನಿವೇಶನ:
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂಬುದಕ್ಕೆ ಮುಸ್ಲಿಂರಿಗೆ 1,800 ನಿವೇಶನ ನೀಡಿರುವುದೇ ಸಾಕ್ಷಿಯಾಗಿದೆ. ಜಾತಿ ಧರ್ಮಕ್ಕೆ ಅತೀಥವಾಗಿ ನಿವೇಶನ ವಿತರಿಸಲಾಗಿದೆ. ಇಂದು ಧರ್ಮ, ಜಾತಿ ಹೆಸರಿನಲ್ಲಿ ವಿರೋಧ ಪಕ್ಷದವರು ಮತ ಕೇಳುತ್ತಿದ್ದಾರೆ. ಅಭಿವೃದ್ಧಿಯ ರಥ ಮುಂದುವರಿಯಬೇಕು ಎಂಬ ಉದ್ಧೇಶದಿಂದ ತಾವು ಮತಯಾಚನೆ ಮಡುತ್ತಿದ್ದೇವೆ. ಪ್ರೀತಿ, ವಿಶ್ವಾಸಕ್ಕೆ ಮತ ನೀಡಬೇಕು, ಜಾತಿ, ಧರ್ಮಕ್ಕಲ್ಲ. ಮಾತುಗಾರ ಬೇಕಾ, ಕೆಲಸಗಾರ ಬೇಕಾ ತೀರ್ಮಾನಿಸುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಅನುಸೂಯಮ್ಮ, ನಗರಸಭಾ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ(ಬಾಬು), ಬಿಎಂಟಿಸಿ ಉಪಾಧ್ಯಕ್ಷ ಕೆವಿ ನವೀನ್ ಕಿರಣ್, ಸುಮಾ ಶಶಿಶೇಖರ್, ಅಶೋಕ್, ಲೀಲಾವತಿ ಶ್ರೀನಿವಾಸ್, ಶ್ರೀನಾಥ್, ವಿಜಯಮ್ಮ, ಜೆಸಿಬಿ ಮಂಜುನಾಥ್, ಜಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.