ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.26: ಹಳೇ ಮೈಸೂರಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರವಾಗಲಿದೆ, ಕಾಂಗ್ರೆಸ್ ಸ್ಥಾನಗಳು ಕುಸಿಯಲಿದೆ. ಅಲ್ಲದೆ ಬಿಜೆಪಿ ಬಹುಮತ ಪಡೆದು ರಾಜ್ಯದಲ್ಲಿ ಮತ್ತೆ ಆಡಳಿತ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ಭದ್ರಕೋಟೆಯಾಗಿರುವ ಹಳೆ ಮೈಸೂರಲ್ಲಿ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ವಿವಿಧ ಪ್ರಯತ್ನಗಳನ್ನು ಪಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕಾರ್ಯ, ಸ್ಟಾರ್ ಪ್ರಚಾರಕರನ್ನೂ ಕರೆಸಿಕೊಳ್ಳುತ್ತಿದೆ. ಹೀಗಾಗಿ ಜೆಡಿಎಸ್ ಭದ್ರಕೋಟೆ ಈ ಬಾರಿ ಛಿದ್ರವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಮ್ಮ ಅಭಿಪ್ರಾಯ ತಿಳಿಸಿದರು.
ಜೊತೆಗೆ ಕಾಂಗ್ರೆಸ್ ಈ ಬಾರಿಯ ವಿಧಾನಸಭಾ ಚುನಾವಣೆಯ್ಲಲಿ 80 ಸ್ಥಾನ ಕೂಡಾ ಗಳಿಸುವುದಿಲ್ಲ. ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದಿಂದ ನುಡಿದರು. ಪ್ರಧಾನಿ ನರೇಂದ್ರ ಮೋದಿಜಿ, ಅಮಿತ್ ಶಾ, ನಡ್ಡಾ ಮತ್ತಿತರ ಪ್ರಮುಖರ ಭೇಟಿಯಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದೆ. ಇದು ಗೆಲುವಿನ ಫಲಿತಾಂಶವನ್ನು ನೀಡಲಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಈ ಬಾರಿ 75 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು ಜನರನ್ನು ತಲುಪಿವೆ ಎಂದರು.
ಮೀಸಲಾತಿಯಲ್ಲಿಯೂ ಬಿಜೆಪಿ ನ್ಯಾಯ ಕೊಟ್ಟಿದೆ. ಆದರೆ, ಕಾಂಗ್ರೆಸ್ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದೆ. ವೀರಶೈವ, ಲಿಂಗಾಯತರನ್ನು ವಿಭಜನೆ ಮಾಡಿದರು. ಲಿಂಗಾಯತ ಸಮುದಾಯದ ಬಗ್ಗೆ ಸಿದ್ಧರಾಮಯ್ಯ ಹೀನವಾಗಿ ಮಾತನಾಡಿದ್ದಾರೆ. ಸಿದ್ಧರಾಮಯ್ಯ ತುಷ್ಠೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಏಪ್ರಿಲ್ 27 ರಂದು 50 ಲಕ್ಷ ಕಾರ್ಯಕರ್ತರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ಮಾಡುತ್ತಾರೆ. ಕಾರ್ಯಕರ್ತರಿಗೆ ಪ್ರೇರಣೆ ಕೊಡುತ್ತಾರೆ ಎಂದರು. ಇವತ್ತು ಮನೆಮನೆಗೆ ಸಂಪರ್ಕ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದರಿಂದ ಬಿಜೆಪಿ ಗಲಿಬಿಲಿಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹುಬ್ಬಳ್ಳಿ ಹತ್ತಾರು ಪ್ರದೇಶಗಳ ಕೇಂದ್ರ ಸ್ಥಾನ. ಹೀಗಾಗಿ ಎಲ್ಲ ನಾಯಕರು ಇಲ್ಲಿಗೆ ಬರುತ್ತಿದ್ದಾರೆ ಹೊರತು ಶೆಟ್ಟರ್ ಕಾರಣಕ್ಕೆ ಅಲ್ಲ. ಬಿಜೆಪಿ ದುರ್ಬಲವಾಗಿದೆ ಎಂದು ಮೋದಿ ಸೆಂಟ್ರಲ್ ಕ್ಷೇತ್ರಕ್ಕೆ ಬರುತ್ತಿಲ್ಲ. ಬೇರೆ ಪ್ರದೇಶಕ್ಕೆ ಬಂದಂತೆ ಮೋದಿ ಇಲ್ಲಿಯೂ ಬರ್ತಾರೆ ಎಂದರು. ನಿನ್ನೆ ಅಮಿತ್ ಶಾ ರೋಡ್ ಶೋ ನಡೆಸಿದ್ದರು, ಅಲ್ಲದೆ ಸಾಲು ಸಾಲು ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿಯವರೂ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ನಾವು ಒಂದು ಸಮುದಾಯದ ಓಲೈಕೆ ಮಾಡುವ ಕೆಲಸ ಮಾಡಿಲ್ಲ. ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡುತ್ತೇವೆ ಎಂದರು. ಶೆಟ್ಟರ್ ಗೆ ಟಿಕೆಟ್ ಕೈ ತಪ್ಪಲು ಬಿ.ಎಲ್.ಸಂತೋಷ ಕಾರಣ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷ ಬಿಟ್ಟ ಮೇಲೆ ಶೆಟ್ಟರ್ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಒಬ್ಬರ ತೀರ್ಮಾನ ಅಂತಿಮ ಆಗುವುದಿಲ್ಲ ಅಂತ ಶೆಟ್ಟರ್ ಗೆ ಗೊತ್ತಿದೆ. ಸಾಮೂಹಿಕ ನಿರ್ಣಯ ಆಗುತ್ತದೆ ಎಂದು ಆರೋಪವನ್ನು ತಳ್ಳಿಹಾಕಿದರು.
ಬಿಜೆಪಿಯಿಂದ ಬಂಡಾಯ ಎದ್ದವರು ಯಾರೂ ಗೆಲುವು ಸಾಧಿಸಿಲ್ಲ. ಹಲವು ಸ್ಥಾನಮಾನಗಳನ್ನು ಪಡೆದು ಇದೀಗ ಪಕ್ಷ ಬಿಟ್ಟಿರುವ ಜಗದೀಶ ಶೆಟ್ಟರ್ ಅವರ ಭವಿಷ್ಯ ಮೇ 13ರಂದು ನಿರ್ಧಾರವಾಗಲಿದೆ ಎಂದು ಅವರು ನುಡಿದರು. ಎಲ್ಲ 224 ಕ್ಷೇತ್ರಗಳನ್ನು ಸವಾಲಾಗಿಯೇ ಸ್ವೀಕಾರ ಮಾಡಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ್ ಕುಂದಗೋಳ್ಮಠ, ರಾಜ್ಯ ಮಾಧ್ಯಮ ಸಮಿತಿ ಸಂಚಾಲಕ ಕರುಣಾಕರ್ ಖಾಸಲೆ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಪ್ರಶಾಂತ್ ಕಡೆಂಜಿ, ವಕ್ತಾರರಾದ ಗುರು ಪಾಟೀಲ್ ಮತ್ತು ರವಿ ನಾಯಕ್ ಉಪಸ್ಥಿತರಿದ್ದರು