ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.26:ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ ರೈತ ಮೋರ್ಚದ ಉಪಾಧ್ಯಕ್ಷರಾದ ರಾಮರೆಡ್ಡಿ, SC ಘಟಕದ ಉಪಾಧ್ಯಕ್ಷರಾದ ವಿಜಯ್, ಜಿಲ್ಲೆಯ ಪ್ರಮುಖರು ಸೇರಿದಂತೆ ನೂರಾರು ಸಂಖ್ಯೆಯ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ತತ್ವ ಸಿದ್ದಾಂತಕ್ಕೆ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬೇಷರಾತ್ತಾಗಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಹಿಂದೆ ಎರಡು ಬಾರಿ ಗೆದ್ದಿತ್ತು. ಕಾಂಗ್ರೆಸ್ಸಿನಿಂದ ಸಚಿವ ಸುಧಾಕರ್ ಶಾಸಕರಾಗಿದ್ದರು. ಆದರೆ ಅವರು ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಇದೀಗ ಹೊಸ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ’ ಎಂದು ತಿಳಿಸಿದರು.
40% ಭ್ರಷ್ಠಾಚಾರ, ನೇಮಕಾತಿಗಳ ಹಗರಣ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಬಿಜೆಪಿ ದುರಾಡಳಿತದ ವಿರುದ್ಧ ಧ್ವನಿ ಕೇಳಿ ಬರುತ್ತಿದೆ. ಬಿಜೆಪಿ ನಮ್ಮ ಜೀವನವೇ ಹಾಳು ಮಾಡಿದೆ. ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಕೇಂದ್ರದ ಮೋದಿ ಸರ್ಕಾರ ದೊಡ್ಡ ದೊಡ್ಡ ವ್ಯಾಪಾರಸ್ತರ ಕೈಗೊಂಬೆಯಾಗಿ ಸರ್ಕಾರ ನಡೆಸುತ್ತಿದ್ದು, ಅವರ 12 ಲಕ್ಷ ಕೋಟಿ ಸಾಲಮನ್ನಾ ಮಾಡಿದೆ ಅದೇರೀತಿ 2014ರಿಂದ 2023ವರೆಗೆ ಕೇಂದ್ರ ಸರ್ಕಾರ 103 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದರಿಂದ ಬಡವರ ಬದುಕು ಬೀದಿಗೆ ಬಂದಂತಾಗಿದೆ, ಆದರೆ ರೈತರ ಸಂಕಷ್ಟವನ್ನು ಅರಿಯುವಲ್ಲಿ ಡಬಲ್ ಎಂಜಿನ್ ವಿಫಲವಾಗಿದೆ’ ಎಂದು ಆರೋಪಿಸಿದರು.
ಕಳೆದ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಪಕ್ಷ 600 ಆಶ್ವಾಸನೆಯನ್ನು ಕೊಟ್ಟಿದ್ದರು ಆದರೆ ಈಡೇರಿಸಿದು ಮಾತ್ರ 60 ಆಶ್ವಾಸನೆಗಳನ್ನು ಮಾತ್ರ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಕೇಂದ್ರದ ಬಿಜೆಪಿ ಸರ್ಕಾರ ಹೇಳಿತ್ತು, ರೈತರ ಹತ್ತಿರ ಕೊಡ್ತೀವಿ ಅನ್ನುವುದು ಅದಕ್ಕಿಂತ ಜಾಸ್ತಿ ಕಿತ್ತುಕೊಳ್ಳುವುದು ಡಬಲ್ ಎಂಜಿನ್ ಸರ್ಕಾರದ ಬಹುದೊಡ್ಢ ಸಾಧನೆ. ವಿದೇಶದಿಂದ ಕಪ್ಪುಹಣ ಸೇರಿದಂತೆ ಉದ್ಯೋಗ ಸೃಷ್ಠಿಯ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ಈ ರೀತಿ ಕೇಂದ್ರ ಸರ್ಕಾರ ದೇಶದ ಜನತೆಗೆ ಮೋಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ವೇಳೆ 23 ಕೋಟಿಗಿಂತ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದರು. ಆದರೆ ಕಳೆದ 9 ವರ್ಷದ ಮೋದಿ ಸರ್ಕಾರದ ಅವಧಿಯಲ್ಲಿ 20 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಬಂದಿರುವುದೇ ಕೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿದರೆ ಮಾತ್ರ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಎಲ್ಲ ವರ್ಗದ ಜನರ ಪರ ಮತ್ತು ರೈತರ ಪರ ಕೆಲಸ ಮಾಡಲು ಸಾಧ್ಯ. ಕಾನೂನು ಸುವ್ಯವ್ಯಸ್ಥೆ ಸೇರಿದಂತೆ ಉತ್ತಮ ಆಡಳಿತ ನೀಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕೆಸಿ ರೆಡ್ಡಿಯಿಂದ ಹಿಡಿದು ಸಿದ್ದರಾಮಯ್ಯ ವರೆಗಿನ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದುವರೆಗೂ ಒಳ್ಳೆಯ ಆಡಳಿತ ನೀಡಿದ ಇತಿಹಾಸವಿದೆ’ ಎಂದರು.
ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯಿದೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನ ಬೇಸತ್ತಿದ್ದಾರೆ. ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದೆ, ಕಾಂಗ್ರೆಸ್ ಗೆಲ್ಲಲಿದೆ. ಸೀ ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಲಾಗಿದೆ. ಹಾಗಾಗಿ ಈ ಬಾರಿ ನಿಶ್ಚಿತವಾಗಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.