ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.26: ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಫ್ರೇಜರ್ಟೌನ್ನಲ್ಲಿ ತಮ್ಮ ಚುನಾವಣಾ ಕಚೇರಿ ಪ್ರಾರಂಭ ಮಾಡಿದರು.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 60,61 ಮತ್ತು 78 ವಾರ್ಡ್ಗಳಿಗೆ ಸಂಬಂಧಿಸಿದಂತೆ ಚುನಾವಣಾ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಕಚೇರಿ ಉದ್ಘಾಟನೆ ವೇಳೆ ಕ್ಷೇತ್ರದ ನೂರಾರು ಜನರು ಜಮಾಯಿಸಿದ್ದರು. ಜೈಭೀಮ್ ಘೋಷಣೆಗಳನ್ನು ಕೂಗಿದರು.
ಆರಂಭದಲ್ಲಿ ಸಾಂಪ್ರದಾಯಿಕ ಪೂಜೆಗಗಳನ್ನು ನೆರವೇರಿಸುವುದರೊಂದಿಗೆ ಕಚೇರಿ ಉದ್ಘಾಟನೆ ಮಾಡಲಾಯಿತು. ಬಳಿಕ ಮೌಲ್ವಿಗಳು ಪ್ರಾರ್ಥನೆ ಸಲ್ಲಿಸಿ ಅಖಂಡ ಶ್ರೀನಿವಾಸಮೂರ್ತಿ ಅವರ ಗೆಲುವಿಗೆ ಹಾರೈಸಿದರು.
ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ ಅವರು, ಪುಲಿಕೇಶಿನಗರದಲ್ಲಿ 60,61 ಮತ್ತು 78 ಮೂರು ವಾರ್ಡ್ ಸೇರಿ ಒಂದು ಮುಖ್ಯ ಕಚೇರಿ ಆರಂಭ ಮಾಡಿದ್ದೇವೆ. ಕ್ಷೇತ್ರದ ಜನರು ಯಾವುದೇ ಸಂದರ್ಭದಲ್ಲಿ ಇಲ್ಲಿಗೆ ಬಂದು ತಮ್ಮ ಕಷ್ಟಸುಖಗಳನ್ನು ಹೇಳಿಕೊಳ್ಳಬಹುದು ಎಂದು ಹೇಳಿದರು.
ನಾನು ಇಲ್ಲಿ ಸ್ಥಳೀಯ ವ್ಯಕ್ತಿ. ಇದೇ ಕ್ಷೇತ್ರದಲ್ಲಿಯೇ ನಾನು ಇಲ್ಲಿ ಹುಟ್ಟಿ ಬೆಳೆದಿದ್ದೇನೆ. ಎಲ್ಲಿಂದಲೋ ಹೊರಗಡೆಯಿಂದ ಬಂದವನಲ್ಲ. ಇಲ್ಲಿ 10 ವರ್ಷಗಳಿಂದ ಇಲ್ಲಿ ಶಾಸಕನಾಗಿ ಸಹ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹೀಗಾಗಿ ಸಹಜವಾಗಿ ನನಗೆ ಜನರ ಬೆಂಬಲ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡುವುದರಿಂದ ವಂಚನೆ ಮಾಡಿತು. ಆದರೆ, ಕ್ಷೇತ್ರದ ಜನ ನನ್ನನ್ನು ಬೆಂಬಲಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹಿಸಿದರು. ಈಗ ಬಿಎಸ್ಪಿಯಿಂದ ಸ್ಪರ್ಧಿಸಿದ್ದೇನೆ. ಖಂಡಿತವಾಗಿ ಕಳೆದ ಬಾರಿಯಿಂತ ಈ ಸಲವೂ ಸಹ ಅತಿ ಹೆಚ್ಚಿನ ಮತಗಳ ಅಂತರದಿಂದಲೇ ಗೆಲ್ಲುತ್ತೇನೆ ಎಂದು ಅಖಂಡ ಶ್ರೀನಿವಾಸಮೂರ್ತಿ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.