ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.26: ನಗರ ಸ್ವೀಪ್ ಸಮಿತಿ ಹಾಗೂ ಶಿಡ್ಲಘಟ್ಟ ನಗರಸಭೆ ವತಿಯಿಂದ ‘ಮತಗಟ್ಟೆ ಬಗ್ಗೆ ತಿಳಿಯಿರಿ’ ಎಂಬ ಜಾಗೃತಿ ಕಾರ್ಯಕ್ರಮದ ಜಾಥಾ ಕಾರ್ಯಕ್ರಮವನ್ನು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಮುನಿರಾಜು ಅವರು ತಮಟೆ ಹೊಡೆಯುವ ಮೂಲಕ ಚಾಲನೆ ನೀಡಿದರು.
ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಮುನಿರಾಜು ಮಾತನಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮತಗಟ್ಟೆಯಲ್ಲಿ ಮತದಾರರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಹೆಚ್ಚಿನ ರೀತಿಯಲ್ಲಿ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಬೇಕೆಂದು ಕರೆಕೊಟ್ಟರು.
ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇಲೆ ನಗರದಲ್ಲಿನ ಎಲ್ಲಾ 38 ಸಂಖ್ಯೆಯ ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳಾದ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಶೇಷಚೇತನರಿಗಾಗಿ ರ್ಯಾಂಪ್ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಮತಗಟ್ಟೆ ಕೇಂದ್ರಗಳಿಗೆ ಆಕರ್ಷಕ ಚಿತ್ರಣಗಳನ್ನು ಬಿಡಿಸಲಾಗಿದೆ ಎಂದು ತಿಳಿಸಿದರು.
ನಗರಸಭೆಯ ಪೌರಾಯುಕ್ತ ಆರ್ ಶ್ರೀಕಾಂತ್ ಮಾತನಾಡಿ, ಕಳೆದ ಎರಡು ದಿನಗಳಿಂದ ಮತದಾರರಿಗೆ ಮತಗಟ್ಟೆಗಳ ಬಗ್ಗೆ ಸಂಬಂಧಿಸಿದ ಮತಗಟ್ಟೆ ಅಧಿಕಾರಿ/ಹೆಕ್ಟರ್ ಅಧಿಕಾರಿಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಚುನಾವಣೆಯಲ್ಲಿ ಕಡಿಮೆ ಮತಲನವಾದ ಮತಗಟ್ಟೆ ವ್ಯಾಪ್ತಿಯಲ್ಲಿನ ಮತದಾರರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಮತದಾನದ ದಿನ ಗೈರು ಹಾಜರಾಗದೇ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೋರಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಮತಗಟ್ಟೆಗಳ ಬಳಿ ಚುನಾವಣಾ ಆಯೋಗದ ನಿರ್ದೇಶನದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ನಗರಸಭೆಯ ಸಿಬ್ಬಂದಿ ವರ್ಗದವರಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಸಂಚರಿಸಿ ಮತದಾರರಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕಛೇರಿ ವ್ಯವಸ್ಥಾಪಕಿ ಕೆ ರಾಜರಾಜೇಶ್ವರಿ, ಆರೋಗ್ಯ ನಿರೀಕ್ಷಕ ಮುರಳಿ, ಕಂದಾಯಾಧಿಕಾರಿ ಎನ್ ನಾಗರಾಜ್, ಸೆಕ್ಸ ಅಧಿಕಾರಿ ಕೆ.ಎಂ ಸುಧಾ, ಕಂದಾಯ ನಿರೀಕ್ಷಕರಾದ ಮೊಹಮದ್ ಅತೀಕ್ವುಲ್ಲಾ ಮತ್ತಿತರರು ಭಾಗವಹಿಸಿದ್ದರು.