ಸುದ್ದಿಮೂಲ ವಾರ್ತೆ,
ಮೈಸೂರು, ಏ.27: ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕಡೆ ಕಣ್ತೆರೆದು ನೋಡಲಿಲ್ಲ, ಬಾಯ್ತೆರೆದು ಮಾತನಾಡಲಿಲ್ಲ. ಈಗ ಮಾತನಾಡಿದರೆ ಓಟುಗಳು ಬರಲಿಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ತಿರುಗೇಟು ನೀಡಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಂದಿಗೆ ಹೇಳಲು ವಿಷಯಗಳೇ ಇಲ್ಲ. ಹಾಗಾಗಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ವಿಭಾಗವಾಗುವ ಸ್ಥಿತಿಯಲ್ಲಿ ಇದ್ದು, ಅದರ ಸ್ಥಾನಗಳು ಇನ್ನಷ್ಟು ಕುಸಿಯಲಿವೆ. ಕೇಂದ್ರ- ರಾಜ್ಯಗಳ ಸಾಧನೆ, ಸಂಘಟನೆಯ ಆಧಾರದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ತಮ್ಮ ಪಕ್ಷವು ಅತ್ಯಧಿಕ ಶಾಸಕ ಸ್ಥಾನವನ್ನು ಗೆಲ್ಲಲಿದೆ. ಕರ್ನಾಟಕ ಮತ್ತು ದೇಶದ ಹಿತದಿಂದ ಮತ್ತೆ ಡಬಲ್ ಎಂಜಿನ್ ಸರ್ಕಾರ ರಚನೆ ಆಗಬೇಕು. ಕರ್ನಾಟಕದ ವಿಕಾಸ ಮತ್ತು ದೇಶದ ಅಭಿವೃದ್ಧಿ ಪರಸ್ಪರ ಜೋಡಿಸಿಕೊಂಡಿವೆ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪಿಎಫ್ಐ ಜಾಲ ವಿಸ್ತೃತವಾಗಿತ್ತು. ದಂಗೆ, ಹಿಂದೂ ಹತ್ಯೆ ನಿರಂತರವಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಇಂಥ ಸ್ಥಿತಿ ಇತ್ತು. ನಮ್ಮ ಸರಕಾರ ಬಂದಾಗ ಅಭಿವೃದ್ಧಿ ಕಾರ್ಯ ವೇಗ ಪಡೆಯಿತು. ಯಡಿಯೂರಪ್ಪ ಅವರ ಸರಕಾರವು ಗೋಹತ್ಯೆ ನಿಷೇಧಿಸಿತು. ಕೇಂದ್ರ ಸರಕಾರವು ಪಿಎಫ್ಐ ನಿಷೇಧಿಸಿತು. ಕಾಂಗ್ರೆಸ್ ತುಷ್ಟೀಕರಣ ನೀತಿ ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ ಎಲ್ಲರ ಅಭಿವೃದ್ಧಿಗೆ ಗಮನ ಕೊಟ್ಟಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪಕ್ಷವು ಇಷ್ಟು ವರ್ಷ ಆಡಳಿತದಲ್ಲಿದ್ದರೂ ಸಾಮಾಜಿಕ ನ್ಯಾಯ ನೀಡಲು ಗಮನ ಕೊಡಲಿಲ್ಲ. ಬಿಜೆಪಿ ಸರಕಾರವು ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ ಅವಮಾನ ಮಾಡುತ್ತಿತ್ತು. ಆದರೆ, ನಮ್ಮ ಸರಕಾರದ್ದು ಕೇವಲ ಘೋಷಣೆಯಲ್ಲ. ಅದು ಅನುಷ್ಠಾನಕ್ಕೆ ಬಂದಿದೆ ಎಂದು ತಿಳಿಸಿದರು.
ಮುಸ್ಲಿಮರಿಗೆ ಅಸಾಂವಿಧಾನಿಕ ರೀತಿಯಲ್ಲಿ ಮೀಸಲಾತಿ ಕೊಡಲಾಗಿತ್ತು. ಅದನ್ನು ರದ್ದು ಮಾಡಿ, ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ತಲಾ ಶೇ 2ರಷ್ಟು ಮೀಸಲಾತಿ ಕೊಡಲಾಗಿದೆ. ಒಳ ಮೀಸಲಾತಿ ಪ್ರಕಟಿಸಿಸಲಾಗಿದೆ.ದ್ದೇವೆ. ಕಾಂಗ್ರೆಸ್ ಮುಸ್ಲಿಮರಿಗೆ ಮತ್ತೆ ಮೀಸಲಾತಿ ಕೊಡುವ ಮಾತನಾಡುತ್ತಿದೆ. ಯಾರ ಮೀಸಲಾತಿ ರದ್ದು ಮಾಡಿ ನೀವು ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೀರಿ ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಶಾಸಕ ರಾಮದಾಸ್, ಜಿಲ್ಲಾ ಕಾರ್ಯಾಧ್ಯಕ್ಷ ಗಿರಿಧರ್ ಮತ್ತಿತರರು ಇದ್ದರು.