ಸುದ್ದಿಮೂಲ ವಾರ್ತೆ
ತುಮಕೂರು, ಏ.27: ಶ್ರೀ ಭಗೀರಥರು ಸತತ ಪ್ರಯತ್ನದಿಂದ ಗಂಗೆಯನ್ನು ಭೂಮಿಗೆ ತಂದಂತಹ ಧೀಮಂತರು. ನಾವು ಇಂದಿಗೂ ಯಾವುದೇ ಒಂದು ಕೆಲಸವನ್ನು, ಅಸಾಧಾರಣ ಸಾಧನೆಗಳನ್ನು “ ಭಗೀರಥ ಪ್ರಯತ್ನ” ವೆಂದೇ ಉದಾಹರಿಸುವುದು ವಾಡಿಕೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಉಪ್ಪಾರ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿಂದು ಆಯೋಜಿಸಲಾಗಿದ್ದ “ಶ್ರೀ ಭಗೀರಥ ಜಯಂತಿ” ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ಜಿಲ್ಲೆಯ ಉಪ್ಪಾರ ಸಮಾಜದ ಬಂಧುಗಳು ಸಮಾಜದ ಏಳಿಗೆಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ
ಮುಖೇನ, ಹಾಸ್ಟೆಲ್ಗಳನ್ನು ನಿರ್ಮಿಸುವ ಮುಖೇನ, ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದರ ಮುಖೇನ ಎಲ್ಲಾ ಬಂಧುಗಳನ್ನು ಸುಶಿಕ್ಷಿತರನ್ನಾಗಿ ರೂಪಿಸಬೇಕು. ಇಂತಹ ಕೆಲಸಗಳು, ಸಾಧನೆಗಳು ರೂಪುಗೊಂಡಲ್ಲಿ ಜಯAತಿ ಆಚರಣೆಗಳು ಸಾರ್ಥಕವಾಗುತ್ತದೆಂದು ತಿಳಿಸಿದರು.
ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಸಿ.ಎಸ್. ಮಂಜುನಾಥ್ ಮಾತನಾಡುತ್ತಾ, ಭಗೀರಥರು ಇಕ್ಷ್ವಾಕು ವಂಶದಲ್ಲಿ ರಾಜಕುಮಾರನಾಗಿ ಜನಿಸಿದರು. ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದು ಅವರಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ತನ್ನ ಕಠಿಣ ಶ್ರಮದಿಂದ ಗಂಗೆಯನ್ನು ಭೂಮಿಗೆ ಕರೆತಂದರು. ಇಂತಹ ಧೀಮಂತರ ಸಾಧನೆಗಳನ್ನು ಸಮಾಜಕ್ಕೆ, ಮುಂದಿನ ಪೀಳಿಗೆಗೆ ತಿಳಿಸಲು ಈ ಜಯಂತಿಯನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯವೆಂದು ತಿಳಿಸಿದರು.
ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಶ್ರೀನಿವಾಸ್ ಮಾತನಾಡುತ್ತಾ, ಸರ್ಕಾರವು ಭಗೀರಥರ ಸಾಧನೆಗಳನ್ನು ಸಮಾಜಕ್ಕೆ ಪುನರ್ ನೆನಪಿಸುವ ಉದ್ದೇಶದಿಂದ ಹಾಗೂ ಉಪ್ಪಾರ ಜನಾಂಗವು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಸದುದ್ದೇಶದಿಂದ ಈ ಜಯಂತಿ ಕಾರ್ಯಕ್ರಮವನ್ನು ರೂಪಿಸಿರುತ್ತದೆ. ಸರ್ಕಾರದ ಆಶಯದಂತೆ ಜನಾಂಗದ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಭವಿಷ್ಯದ ಸತ್ ಪ್ರಜೆಗಳಾಗಿ
ರೂಪಿಸಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್, ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿ ಡಾ: ನಾಗೇಶ್, ಉಪ್ಪಾರ ಜನಾಂಗದ ಮುಖಂಡರಾದ ಆರ್. ರೇಣುಕಯ್ಯ, ಹೆಚ್. ಆರ್. ಸತೀಶ್, ಗಂಗಪ್ಪ, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ವಕೀಲ ಎನ್. ಅನಿಲ್
ಕುಮಾರ್, ಹೆಚ್.ಕೆ. ಶಿವಣ್ಣ, ರಂಗನಾಥ್, ಲೋಕೇಶ್, ಧರ್ಮರಾಜು, ಲಿಂಗಣ್ಣ ಮತ್ತು ಮೂಡಲಗಿರಿ ಅವರು ಉಪಸ್ಥಿತರಿದ್ದರು.