ಬೆಂಗಳೂರು, ಏ.27: ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಜಾರಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಕ್ಷಿಪ್ರಗತಿಯ ಅನುಷ್ಠಾನ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿರುವ ಜೆಡಿಎಸ್ ಪಕ್ಷವು, ಜನತೆಗೆ ಸಾಮಾಜಿಕ ಭದ್ರತೆ ನೀಡುವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ರಚನೆ ಸಮಿತಿ ಅಧ್ಯಕ್ಷ ಬಿಎಂ ಫಾರೂಕ್ ಹಾಗೂ ಸಮಿತಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ವರ್ಷಕ್ಕೆ 5 ಸಿಲಿಂಡರ್ ಉಚಿತ, ಸ್ತ್ರೀಶಕ್ತಿ ಸಾಲ ಮನ್ನಾ, ಕನ್ನಡಕ್ಕೆ ಅಗ್ರ ಮನ್ನಣೆ, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಮೀಸಲು, ವಕೀಲರ ರಕ್ಷಣೆಗೆ ಕಾಯಿದೆ, ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ, ಬೋನ್ ಮ್ಯಾರೊ ಸೇರಿ ದುಬಾರಿ ಕಾಯಿಲೆಗಳಿಗೆ 25 ಲಕ್ಷ ರೂ.ವರೆಗೆ ಪರಿಹಾರ, ನ್ಯಾ.ಸಾಚರ್ ವರದಿ ಜಾರಿಗೆ ಕ್ರಮ, ಪೊಲೀಸರ ವೇತನ ತಾರತಮ್ಯ ನಿವಾರಣೆ, ವಿಕಲಚೇತನರ ಪಿಂಚಣಿ 2500, ಹಿರಿಯ ಪಿಂಚಣಿ 5000 ರೂ.ಗಳಿಗೆ ಏರಿಕೆ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಪಕ್ಷ ಮಾಡಿದೆ.
ರೈತ ಸ್ವಾಭಿಮಾನದ ಬದುಕು ನಡೆಸುವ ನಿಟ್ಟಿನಲ್ಲಿ ಜೆಡಿಎಸ್ ಚಿಂತಿಸಿದೆ. ಪ್ರತೀ ಎಕರೆಗೆ 10,000 ರೂ. ಸಹಾಯ ಧನ, ರೈತ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ, ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2000 ರೂ. ಸಹಾಯ ಧನ, ದಿನದ 24 ಗಂಟೆ ಕಾಲ ಕೃಷಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು ಎಂದು ಜೆಡಿಎಸ್ ಘೋಷಣೆ ಮಾಡಿದೆ.
ಅಲ್ಲದೆ, ಪಂಚರತ್ನ ಯೋಜನೆಗಳಾದ ಎಲ್ಲರಿಗೂ ಸಮಾನ ಆರೋಗ್ಯ ಸೌಲಭ್ಯ ಆರೋಗ್ಯ ಸಂಪತ್ತು, ಸಮಾನ ಶಿಕ್ಷಣ ಕೊಡುವ ಶಿಕ್ಷಣವೇ ಆಧುನಿಕ ಶಕ್ತಿ, ಕೃಷಿಗೆ ಆಧುನಿಕ ಕಾಯಕಲ್ಪ ನೀಡುವ ರೈತ ಚೈತನ್ಯ, ಉಚಿತ ಮನೆ ನೀಡುವ ವಸತಿ ಆಸರೆ, ಯುವಕರು ಹಾಗೂ ಮಹಿಳೆಯರ ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣಕ್ಕೆ ರೂಪಿಸಲಾಗಿರುವ ಯುವನವ ಮಾರ್ಗ – ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿ ಮಾಡುವುದಾಗಿ ಪಕ್ಷ ಘೋಷಣೆ ಮಾಡಿದೆ.
ಜನತಾ ಪರ್ವದ ಅಡಿಯಲ್ಲಿ ರೂಪಿಸಿ, ರಾಜ್ಯದ ಉದ್ದಗಲಕ್ಕೂ ಕೈಗೊಂಡ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಂಗ್ರಹ ಮಾಡಲಾದ ಜನರ ಅಪೇಕ್ಷೆ ಹಾಗೂ ಸಲಹೆಗಳ ಆಧಾರದಲ್ಲಿ ಜನತಾ ಪ್ರಣಾಳಿಕೆ ರಚನೆ ಮಾಡಲಾಗಿದೆ ಎಂದು ಪಕ್ಷ ಹೇಳಿದೆ.
ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ:
ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ, ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6,000 ರೂ. ಭತ್ಯೆ, ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 5000 ರೂ.ವರೆಗೆ ಹೆಚ್ಚಿನ ವೇತನ, ಕನಿಷ್ಟ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ ಕೊಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.