ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.೨೮: ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರವು ಕಳೆದ ಆರು ದಶಕಗಳಿಂದಲೂ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು ಅನೇಕ ಮಹತ್ವದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದ ಹೃದಯರೋಗ ತಜ್ಞರು ಮತ್ತು ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರದ ಉಪಾಧ್ಯಕ್ಷರಾಗಿದ್ದ ಡಾ.ವಿ.ಪರಮೇಶ್ವರ ಅವರ ನೆನಪಿನ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಅವರ ಕುಟುಂಬದವರ ಸಹಕಾರದೊಂದಿಗೆ ಏರ್ಪಡಿಸುತ್ತಾ ಬಂದಿದ್ದು ಈ ವರ್ಷ ʼಭಕ್ತಿ ಗೀತಾಂಜಲಿʼ ಎನ್ನುವ ಹೆಸರಿನಲ್ಲಿ ವಿಶಿಷ್ಟವಾಗಿ ಅದನ್ನು ರೂಪಿಸಲಾಗಿದೆ.
ಮೇ. 8 ಸೋಮವಾರ ಬೆಳಗ್ಗೆ 10.30ಕ್ಕೆ ಭಾರತೀಯ ವಿದ್ಯಾಭವನದ ಕೆ.ಆರ್.ಜೆ ಸಭಾಗಂಣದಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು ಪ್ರಖ್ಯಾತ ವಿಧ್ವಾಂಸರಾದ ಶತವಧಾನಿ ಡಾ. ಆರ್. ಗಣೇಶ್ ಅದನ್ನು ವಿಭಿನ್ನವಾದ ರೀತಿಯಲ್ಲಿ ವಿನ್ಯಾಸಗೊಳಿಸಿ ಪ್ರಸ್ತುತ ಪಡಿಸಲಿದ್ದಾರೆ. ಇದರೊಂದಿಗೆ ಶ್ರೀ ರಾಜಗೋಪಾಲ ಶರ್ಮಾ ಅವರಿಂದ ವೇದ ಪಾರಾಯಣ ಕಾರ್ಯಕ್ರಮವು ನಡೆಯಲಿದೆ. ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ಡಾ. ರಂಜನಿ ವಾಸುಕಿ ಅವರ ಹಾಡುಗಾರಿಕೆಯ ಕಾರ್ಯಕ್ರಮವು ಆಯೋಜನೆಗೊಂಡಿದ್ದು ವಿದ್ವಾನ್ ವಿಶ್ವಜಿತ್ ಮತ್ತೂರ ವಾಯಲಿನಲ್ಲಿ ಮತ್ತು ವಿದ್ವಾನ್ ಸಾಯಿವಂಶಿ ಮೃದಂಗದಲ್ಲಿ ಹಾಡುಗಾರಿಕೆಗೆ ಸಾತ್ ನೀಡಲಿದ್ದಾರೆ.
ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀ ಎಚ್.ಎನ್ ಸುರೇಶ್ ಅವರು ಈ ವಿಶೇಷ ಭಕ್ತಿ ಗೀತಾಂಜಲಿ ಕಾರ್ಯಕ್ರಮವೂ ಭಾರತೀಯ ಸಂಸ್ಕೃತಿ ಮತ್ತು ಭಕ್ತಿ ಸಂಗೀತದ ಪರಂಪರೆಯನ್ನು ಪ್ರಚುರ ಪಡಿಸುವ ಮಹತ್ವದ ಕಾರ್ಯಕ್ರಮ ವಾಗಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಅದನ್ನು ಯಶಸ್ವಿಗೊಳಿಸ ಬೇಕೆಂದು ಅಹ್ವಾನ ನೀಡಿದ್ದಾರೆ.