ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.28: ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್ ಕುಮಾರ್, ಜೆಡಿಎಸ್ ನಾಯಕ, ಮಾಜಿ ಸಚಿವ ಬಿ ಬಿ ನಿಂಗಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಸೇರ್ಪಡೆಯಾದರು.
ಈ ಮೊದಲು ಜೆಡಿಎಸ್ನಲ್ಲಿದ್ದ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಇಂದು ಕಾಂಗ್ರೆಸ್ ಸೇರಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಗೀತಾ ಅವರು, ಡಿಕೆಶಿಯವರ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.
ಸಹೋದರ ಮಧು ಬಂಗಾರಪ್ಪ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಹಿಂದೆ ಮಧು ಬಂಗಾರಪ್ಪ ಅವರು ಜೆಡಿಎಸ್ನಲ್ಲಿದ್ದರು, ಚುನಾವಣೆ ಹಿನ್ನೆಲೆಯಲ್ಲಿ ನಾಳೆಯಿಂದ ಸಹೋದರನ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಲವು ದಿನಗಳಿಂದ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ನಮ್ಮ ಗಾಳಕ್ಕೆ ಬಿದ್ದಿರಲಿಲ್ಲ. ಬಂಗಾರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಮೊದಲು ನಮ್ಮ ಗಾಳಕ್ಕೆ ಸಿಕ್ಕಿದರು.ನಂತರ ನನ್ನ ಸಹೋದರಿ ಗೀತಾಗೆ ಬಲೆ ಹಾಕಬೇಕಾಗಿ ಬಂತು. ನಿನ್ನೆ ರಾಹುಲ್ಗಾಂಧಿ ಮೀನುಗಾರರಿಗೆ ಬಲೆ ಹಾಕಿದರು. ಜೊತೆಗೆ ರಾಜ್ಯದ ಹೆಣ್ಣುಮಕ್ಕಳು ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಐದನೆ ಭರವಸೆಯನ್ನು ಘೋಷಣೆ ಮಾಡಿದರು. ರಾಹುಲ್ಗಾಂಧಿ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಅದರ ಪರಿಣಾಮ ಗೀತಾ ಶಿವರಾಜ್ಕುಮಾರ್ ಇಂದು ಕಾಂಗ್ರೆಸ್ ಸೇರಿದ್ದಾರೆ ಎಂದರು.
ಗೀತಾ ಶಿವರಾಜಕುಮಾರ್ ಅವರ ಮಾತುಗಳು:
ಕಾಂಗ್ರೆಸ್ ಐತಿಹಾಸಿಕ ಪಕ್ಷ. ಈ ಪಕ್ಷಕ್ಕೆ ಸೇರುತ್ತಿರುವುದು ಬಹಳ ಸಂತೋಷವಾಗುತ್ತಿದೆ. ನನ್ನನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡ ಸಹೋದರ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾವು ಕನಕಪುರಕ್ಕೆ ಶಿಫ್ಟ್ ಆಗುತ್ತಿದ್ದೇವೆ ಎಂದು ಮಾಧ್ಯಮಗಳು ತಿಳಿಸುತ್ತಿದ್ದು, ಅದೂ ಕೂಡ ಸಧ್ಯದಲ್ಲೇ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಜತೆ ಕೆಲಸ ಮಾಡಿದ್ದು, ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ನನ್ನ ತಮ್ಮ ಮಧು ಕಾಂಗ್ರೆಸ್ ಸೇರಿದಾಗಲೇ ನಾನು ಕಾಂಗ್ರೆಸ್ ಜತೆಗಿದ್ದೆ. ಶಿವರಾಜಕುಮಾರ್ ಅವರು ಕೂಡ ಕಾಂಗ್ರೆಸ್ ಪಕ್ಷದ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅವರು ಚಿತ್ರೀಕರಣದಲ್ಲಿರುವುದರಿಂದ ಸಮಯ ಬಿಡುವು ಮಾಡಿಕೊಂಡು ಪ್ರಚಾರ ಮಾಡುತ್ತಾರೆ. ಪಕ್ಷ ನನಗೆ ಎಲ್ಲಿ ಹೇಳುತ್ತದೆಯೋ ಅಲ್ಲಿ ಹೋಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಈ ವೇಳೆ ಮಾತನಾಡಿದ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಮೂಡಿಗೆರೆಯಲ್ಲಿ ವಿಚಿತ್ರ ರಾಜಕಾರಣ ನಡೆಯುತ್ತಿದೆ. ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಲಾಯಿತು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಶಾಸಕ ಬೈರತಿ ಸುರೇಶ್, ಎಂಎಲ್ಸಿ ದಿನೇಶ್ ಗೂಳಿಗೌಡ, ಎಐಸಿಸಿ ವಕ್ತಾರ ಗೌರವ್ ವಲ್ಲಭ್, ಡಾ ಬಿ ಎಲ್ ಶಂಕರ್, ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.