ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.29: ಕನ್ನಡ ಸಾಹಿತ್ಯ ಪರಿಷತ್ತುʻಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿʼ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 15,000 ಮೊತ್ತವನ್ನು ಹೊಂದಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023ನೇ ಸಾಲಿನ ಶೈಕ್ಷಣಿಕ ಕ್ಷೇತ್ರದ ʻಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿರುವ ಧಾರವಾಡದ ಕೆ.ಇ. ಬೋರ್ಡ್ ಕನ್ನಡ ಶಾಲೆ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹಾಸನದ ಡಾ. ಡಿ.ಎಚ್. ಯೋಗೀಶ್ವರಪ್ಪ, ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಮಂಡ್ಯದ ಶ್ರೀ ಹೆಚ್. ಎಸ್. ಬಾಲಸುಬ್ರಹ್ಮಣ್ಯ, ನಿರಂತರ ಕನ್ನಡಕ್ಕೆ ಸೇವೆ ಸಲ್ಲಿಸುತ್ತಿರುವ ತುಮಕೂರಿನ ಶ್ರೀಮತಿ ಸುಶೀಲಾ ಸದಾಶಿವಯ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಚಿಕ್ಕನಾಯಕನಹಳ್ಳಿಯ ಶ್ರೀ ಸಾಗರ್ ಎಮ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ದತ್ತಿ ಪ್ರಶಸ್ತಿಗಳ ಆಯ್ಕೆಯಾಗಿರುವ ಎಲ್ಲಾ ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಈ ಎಲ್ಲಾ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸಾಧನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿಯು ಪ್ರಶಸ್ತಿಗೆ ಸೂಕ್ತವಾದವರನ್ನು ಆಯ್ಕೆ ಮಾಡಿದೆ.
ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನದವರು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸುವುದರಿಂದ ಸಮಾಜದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಸಾಧಕರ ಹೆಗಲಿಗೆ ನೀಡುವ ಮೂಲಕ ಸಾಧನೆಯ ದಾರಿಯಲ್ಲಿ ಇರುವವರಿಗೆ ಇದೊಂದು ಪ್ರೇರಣಾದಾಯಕವಾಗಲಿದೆ ಎಂದು ನಾಡೋಜ ಡಾ. ಮಹೇಶ್ ಜೋಶಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ತುಮಕೂರಿನ ಶ್ರೀ ಎಸ್. ರಾಜಶೇಖರ ತುಮಕೂರು, ಕನ್ನಡ ಸಾಹಿತ್ಯ ಪರಿಷತಿನ ಜಿಲ್ಲಾಧ್ಯಕ್ಷರಾದ ಶ್ರೀ ಕೆ. ಎಸ್. ಸಿದ್ಧಲಿಂಗಪ್ಪ, ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.