ಸುದ್ದಿಮೂಲ ವಾರ್ತೆ
ಹುಮನಾಬಾದ್,ಏ.29: ನನ್ನನ್ನು ಬೈಯ್ಯುವುದರಲ್ಲೇ ಕಾಂಗ್ರೆಸ್ ಸಮಯ ವ್ಯರ್ಥ ಮಾಡ್ತಿದೆ. ಚುನಾವಣೆ ಸಂದರ್ಭದಲ್ಲಿ ನನಗೆ ಮತ್ತೆ ಬೈಯುವ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರು ಇದುವರೆಗೂ ನನ್ನನ್ನು 91 ಬಾರಿ ಅವಾಚ್ಯವಾಗಿ ಬೈದಿದ್ದಾರೆ. ಹಾಗೆ ನಿಂದಿಸಿದಾಗಲೆಲ್ಲಾ ಅವರರಿಗೆ ಶಿಕ್ಷೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಇಂದು ಬೀದರ್ ಜಿಲ್ಲೆಯ ಹುಮನಾಬದ್ ನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಬೀದರ್ ನಿಂದ ವಿಧಾನಸಭಾ ಚುನಾವಣೆಗೆ ನನ್ನ ಪ್ರಚಾರ ಯಾತ್ರೆ ಶುರು ಆಗುತ್ತಿರುವುದು ನನ್ನ ಸೌಭ್ಯಾಗ್ಯ. ಭಗವಂತನ ಆಶೀರ್ವಾದ ಮತ್ತು ನಿಮ್ಮೆಲ್ಲರ ಸ್ನೇಹದಿಂದ ನನಗೆ ಯಾವಾಗಲೂ ನಿಮಗಾಗಿ ಕೆಲಸ ಮಾಡಲು ತಾಕತ್ತು ಸಿಗುತ್ತದೆ. ಕರ್ನಾಟಕದ ಕಿರೀಟವಾದ ಬೀದರ್ ಜನತೆಯ ಆಶೀರ್ವಾದ ನಾನು ಪ್ರಧಾನಿ ಅಭ್ಯರ್ಥಿಯಾದಾಗಲೇ ಸಿಕ್ಕಿದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದು “ಈ ಬಾರಿಯ ನಿರ್ಧಾರ, ಬಹುಮತ ಬಿಜೆಪಿ ಸರ್ಕಾರ” ಎಂದು ಇಡೀ ದೇಶಕ್ಕೆ ಸಂದೇಶ ನೀಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಆಡಳಿತಕ್ಕೆ ಸರ್ಕಾರ ಮಾಡುವ ಚುನಾವಣೆ ಅಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ರಾಜ್ಯ ಮಾಡುವ ಚುನಾವಣೆ. ಇದು ವಿಕಸಿತ ಭಾರತಕ್ಕೆ ಕರ್ನಾಟಕದ ಭೂಮಿಕೆಯನ್ನು ತಯಾರು ಮಾಡುವ ಚುನಾವಣೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ವಿಕಾಸವಾದಾಗ ಮಾತ್ರ ಭಾರತ ವಿಕಾಸವಾಗುತ್ತದೆ. ನೀವೆಲ್ಲರೂ ಹೈವೇ ಎಕ್ಸ್ಪ್ರೆಸ್ ವೇ ವಿಸ್ತಾರವಾಗುವ, ಮೆಟ್ರೋ ಅನುಕೂಲತೆ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸುವ, ಹೆಚ್ಚು ಕಡೆಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುವ, ಪ್ರತಿ ವ್ಯವಸಾಯ ಜಮೀನಲ್ಲಿ ಆಧುನಿಕ ಉಪಕರಣಗಳು ಇರುವ ಕರ್ನಾಟಕವನ್ನು ನೀವು ನಿರೀಕ್ಷೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಹಿಂದಿನ 5 ವರ್ಷಗಳಲ್ಲಿ ಸಾಮಾನ್ಯ ಮನುಷ್ಯನೂ ಕರ್ನಾಟಕದಲ್ಲಿ ವಿಕಾಸ ಪರ್ವವನ್ನು ನೋಡಿದ್ದಾನೆ. ನಿಮ್ಮ ಕನಸನ್ನು ನನಸು ಮಾಡುವ ಸಂಕಲ್ಪ ಬಿಜೆಪಿ ತೆಗೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡಲು ಡಬಲ್ ಎಂಜಿನ್ ಸರ್ಕಾರ ಇರುವುದು ಮುಖ್ಯ. ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಡಬಲ್ ಶಕ್ತಿ ಸಿಕ್ಕಿದಾಗ ಕರ್ನಾಟಕವನ್ನು ನಂಬರ್ 1 ಮಾಡವುದನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಡಬಲ್ ಎಂಜಿನ್ ಸರ್ಕಾರದ ಒಂದು ಉದಾಹರಣೆ ಎಂದರೆ ಕರ್ನಾಟಕಕ್ಕೆ ಬಂದಿರುವ ವಿದೇಶೀ ಹೂಡಿಕೆ. ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷ ಸರಿಸುಮಾರು 30 ಸಾವಿರ ಕೋಟಿ ವಿದೇಶೀ ಹೂಡಿಕೆ ಬರುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸರಿಸುಮಾರು 90 ಸಾವಿರ ಕೋಟಿ ಬಂಡವಾಳ ಹರಿದು ಬರುತ್ತಿದೆ. ಇದು ನಮ್ಮ ಸರ್ಕಾರದಲ್ಲಿ 3 ಪಟ್ಟು ಹೆಚ್ಚಾಗಿದೆ. ಕೋವಿಡ್ ಮಹಾಮಾರಿ ಕಾಡಿದಾಗಲೂ, ಯುದ್ಧ ನಡೆಯುತ್ತಿರುವಾಗಲೂ ಇದನ್ನು ಸಾಧಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಡಬಲ್ ಎಂಜಿನ್ ಸರ್ಕಾರವೆಂದರೆ ಡಬಲ್ ಬೆನಿಫಿಟ್ ಮತ್ತು ಡಬಲ್ ಸ್ಪೀಡ್. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇಲ್ಲದಿದ್ದಾಗ ಸಣ್ಣ ಸಣ್ಣ ಯೋಜನೆಗಳನ್ನೂ ಪೂರ್ಣಗೊಳಿಸಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಿದ್ದರು. ನೀರಿನ ಬವಣೆ ಕರ್ನಾಟಕದ ಮಹಿಳೆಯರಿಗೆ ಚೆನ್ನಾಗಿ ಗೊತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ 100 ಕ್ಕೂ ಹೆಚ್ಚು ನೀರಾವರಿ ಯೋಜನೆಗಳನ್ನು ದಶಕಗಳು ಕಳೆದರೂ ಪೂರ್ಣಗೊಳಿಸಿರಲಿಲ್ಲ. ಆದ್ರೆ ಕಳೆದ 9 ವರ್ಷಗಳಲ್ಲಿ ನಿಮ್ಮ ಬಿಜೆಪಿ ಸರ್ಕಾರ 60 ಕ್ಕೂ ಹೆಚ್ಚು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದರಲ್ಲಿ ಅನೇಕ ಯೋಜನೆಗಳು ಕರ್ನಾಟಕಕ್ಕೆ ಸೇರಿದೆ. ಬೀದರ್ ನಲ್ಲೂ ಅನೇಕ ನೀರಾವರಿ ಯೋಜನೆಗಳು ತೀವ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಸಣ್ಣಪುಟ್ಟ ಖರ್ಚುಗಳಿಗಾಗಿ ಅಲ್ಲಿ ಇಲ್ಲಿ ಅಲೆಯುವುದನ್ನು ತಪ್ಪಿಸಿದೆ. ನಾವು ಈ ಯೋಜನೆಯನ್ನು ಪ್ರಾರಂಭಿಸಿದಾಗ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಆದ್ರೆ ಅವರು ನಮ್ಮ ಯೋಜನೆಗೆ ಫಲಾನುಭವಿ ರೈತರ ಹೆಸರನ್ನೂ ಕೇಂದ್ರಕ್ಕೆ ಕಳಿಸಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರೈತರೆಂದರೆ ಎಷ್ಟು ದ್ವೇಷ ಇದೆ ಎಂದು ಇದೇ ತೋರಿಸುತ್ತದೆ. ಮಧ್ಯದಲ್ಲಿ ಕಮಿಷನ್ ಹೊಡೆಯಲು ಸಾಧ್ಯವಾಗದೇ ಇರೋದು ಅವರಿಗೆ ಸಮಸ್ಯೆ ಆಗಿತ್ತು. ಯಾಕಂದ್ರೆ ಈ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹೋಗುತ್ತಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದಾಗ ಲಕ್ಷಾಂತರ ರೈತರ ಮಾಹಿತಿಯನ್ನು ಕೇಂದ್ರಕ್ಕೆ ಹಂಚಿಕೊಂಡಿದ್ದರಿಂದ ಎಲ್ಲ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಸಿಗುತ್ತಿದೆ. ಜತೆಗೆ ಕೇಂದ್ರ ಸರ್ಕಾರ 6 ಸಾವಿರ ಕಳಿಸಿದ್ರೆ ಇಲ್ಲಿನ ಬಿಜೆಪಿ ಸರ್ಕಾರ ಅದಕ್ಕೆ 4 ಸಾವಿರ ಸೇರಿಸಿ ಕೊಡುತ್ತಿದೆ. ಇದರಿಂದ ರೈತರಿಗೆ ಇನ್ನಷ್ಟು ನೆರವಾಗುತ್ತಿದೆ. ಇದರಿಂದ ರಾಜ್ಯದ 60 ಲಕ್ಷ ರೈತರಿಗೆ ಪ್ರಯೋಜನ ಆಗಿದೆ. ಅದರಲ್ಲಿ ಸುಮಾರು 400 ಕೋಟಿ ರೂ ಸಹಾಯಧನವನ್ನು ಬೀದರ್ ರೈತರಿಗೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಪ್ರತಿ ಚುನಾವಣೆಗೂ ಮೊದಲು ರೈತರ ಸಾಲ ಮನ್ನಾ ಮಾಡುವ ಹೆಸರಲ್ಲಿ ಮೋಸ ಮಾಡುತ್ತಿತ್ತು. ಸರ್ಕಾರ ರಚನೆಯಾದರೂ ಸಾಲ ಮನ್ನಾ ಮಾಡುತ್ತಿರಲಿಲ್ಲ. ಛತ್ತೀಸ್ ಘಡ ಮತ್ತು ರಾಜಸ್ಥಾನದಲ್ಲಿ ಇದನ್ನೇ ಹೇಳಿದ್ದರೂ, ಇನ್ನೂ ಅದನ್ನು ಮಾಡಲಿಲ್ಲ. ಕೋಟಿ ಕೋಟಿ ಸಣ್ಣ ರೈತರಿಗೆ ಬ್ಯಾಂಕ್ ಗಳಲ್ಲಿ ಖಾತೆಗಳೇ ಇರಲಿಲ್ಲ. ಯಾವುದೇ ಬ್ಯಾಂಕ್ ಗಳೂ ಅವರಿಗೆ ಸಾಲ ಕೊಟ್ಟಿರಲಿಲ್ಲ. ಅವರು ಶ್ರೀಮಂತರ ಬಳಿ ಅಧಿಕ ಬಡ್ಡಿಗೆ ಸಾಲ ಪಡೆಯುತ್ತಿದ್ದರು. ಈ ಸಾಲ ಮನ್ನಾ ಸೌಲಭ್ಯ ಆ ಸಣ್ಣ ರೈತರಿಗೆ ಸಿಗುತ್ತಲೇ ಇರಲಿಲ್ಲ. ಇದೇ ಕಾಂಗ್ರೆಸ್ನ ಅಸಲಿ ಮುಖ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಿದ್ದಾರೆ. ಕಾಂಗ್ರೆಸ್ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ನಾವು ಕಬ್ಬು ಬೆಳೆಗಾರರಿಗೆ ಸಹಾಯ ಮಾಡಲು ಪೆಟ್ರೋಲ್ ಗೆ ಎಥನಾಲ್ ಮಿಶ್ರಣ ಮಾಡುವ ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ದೇಶದಲ್ಲಿ ಕೇವಲ 40 ಸಾವಿರ ಕೋಟಿ ಲೀಟರ್ ಎಥನಾಲ್ ಉತ್ಪಾದನೆ ಆಗುತ್ತಿತ್ತು. ಈಗ ನಮ್ಮ ಸರ್ಕಾರದಲ್ಲಿ 400 ಕೋಟಿ ಲೀಟರ್ ಗೂ ಹೆಚ್ಚು ಎಥನಾಲ್ ಉತ್ಪಾದನೆ ಆಗುತ್ತಿದೆ. ಪೆಟ್ರೋಲ್ ನಲ್ಲಿ ಎಥನಾಲ್ ಮಿಶ್ರಣ ಮಾಡುತ್ತಿರುವುದರಿಂದ ಕಬ್ಬು ಬೆಳೆಗಾರರಿಗೆ ಹೆಚ್ಚು ಲಾಭ ಆಗುತ್ತಿದೆ. ಕಬ್ಬು ಬೆಳೆಗಾರರ ಸಂಘದ ಸುಮಾರು 10 ಸಾವಿರ ಕೋಟಿ ಸಾಲವನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ. ನಮ್ಮ ಸರ್ಕಾರ ಸಿರಿ ಧಾನ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ್ದೇವೆ. ನಿಮ್ಮ ನೆಚ್ಚಿನ ಜೋಳದ ರೊಟ್ಟಿ ಈಗ ವಿಶ್ವದ ಮೂಲೆ ಮೂಲೆಗೆ ತಲುಪುತ್ತಿದೆ. ಇದರ ಲಾಭವೂ ರೈತರಿಗೆ ಸಿಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಡವರ ಸಮಸ್ಯೆಗಳು ಕಾಂಗ್ರೆಸ್ಗೆ ಅರ್ಥವೇ ಆಗುತ್ತಿರಲಿಲ್ಲ. ಅವರು ಬಡತನವನ್ನು ನೋಡಿಯೇ ಇಲ್ಲ. ವಿಕಾಸದಲ್ಲೂ ಅವರು ರಾಜಕೀಯ ಮಾಡುತ್ತಾರೆ. ಬಡವರಿಗೆ ಮನೆಗಳನ್ನು ಕಟ್ಟಿ ಕೊಡುವ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕಾಂಗ್ರೆಸ್ ಅವರು ರಾಜಕೀಯ ಮಾಡಿದರು. ತಮ್ಮ ಅವಧಿಯಲ್ಲಿ ಅವರು ಅತ್ಯಂತ ನಿಧಾನಗತಿಯಲ್ಲಿ ಮನೆಗಳನ್ನು ಕಟ್ಟಿ ಬಡವರಿಗೆ ಮನೆಗಳು ಕೈಸೇರದಂತೆ ನೋಡಿಕೊಂಡರು. ಇದನ್ನು ನಿಲ್ಲಿಸಿದ್ದು ಬಿಜೆಪಿ ಸರ್ಕಾರ. ಮನೆಗಳನ್ನು ಕಟ್ಟುವ ವೇಗವನ್ನು ಹೆಚ್ಚಿಸಿ ರಾಜ್ಯದಲ್ಲಿ ಈಗ ಸುಮಾರು 9 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೀದರ್ ನಲ್ಲೇ 30 ಸಾವಿರ ಮನೆಗಳು ನಿರ್ಮಾಣವಾಗುತ್ತಿದೆ. ಲಕ್ಷಾಂತರ ಮೌಲ್ಯದ ಆ ಮನೆಗಳನ್ನು ಮಹಿಳೆಯರ ಹೆಸರಲ್ಲಿ ನೋಂದಣಿ ಮಾಡಿಕೊಡಲಾಗುತ್ತೆ ಎಂದು ಪ್ರಧಾನಿ ಮೋದಿ ಹೇಳಿದರು.
ಗ್ರಾಮಗಳಲ್ಲಿ ನಲ್ಲಿಗಳಲ್ಲಿ ಕುಡಿಯುವ ನೀರು ಬರದೇ ಇರುವುದರಿಂದ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ದಶಕಗಳ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ಮನೆಗೆ ನೀರು ಕೊಡುವ ಯೋಜನೆ ಪ್ರಾರಂಭ ಮಾಡಿದೆ. ದೇಶದಲ್ಲಿ 9 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ 40 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಯೋಜನೆ ತಲುಪಿದೆ. ಶೌಚಾಲಯ, ಗ್ಯಾಸ್ ಸಂಪರ್ಕ ಹಾಗೂ ವೈದ್ಯಕೀಯ ಸಲಹೆ ಪಡೆಯುವಲ್ಲಿ ಮಹಿಳೆಯರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಬಡವರನ್ನು ಉದ್ಧಾರ ಮಾಡುವ ಕಾರ್ಯವನ್ನು ಕಾಂಗ್ರೆಸ್ ಅವರು ಇಷ್ಟು ದಶಕಗಳ ಆಡಳಿತದಲ್ಲಿ ಮಾಡಿರಲಿಲ್ಲ. ಆದ್ರೆ ನಿಮ್ಮ ಮಗನಾದ ನಾನು ದೆಹಲಿಯಲ್ಲಿ ಕೂತು ಕೆಲಸ ಮಾಡುತ್ತಿದ್ದಾನೆ. ಮಹಿಳೆಯರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲಿ ಸರ್ಕಾರ ಯೋಜನೆಗಳ ಸಹಾಯ ಧನ ನೇರವಾಗಿ ಅವರಿಗೆ ತಲುಪುವ ಹಾಗೆ ಮಾಡಲಾಗಿದೆ. ಗ್ಯಾರಂಟಿ ಇಲ್ಲದೇ ಮುದ್ರಾ ಲೋನ್ ನೀಡಲಾಗುತ್ತಿದೆ. ಬಡವರ ಮನೆಗಳಿಗೆ ರೇಷನ್ ಸಮಸ್ಯೆ ಆಗದಿರುವಂತೆ ಮುಕ್ತ ರೇಷನ್ ಖರೀದಿ ಸೌಲಭ್ಯ ಮಾಡಲಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಂಜಾರ ಸಮುದಾಯದ ಏಳಿಗೆ ಕಾಂಗ್ರೆಸ್ ಸರ್ಕಾರಕ್ಕೆ ಬೇಡವಾಗಿತ್ತು. ಆದರೆ ಬಿಜೆಪಿ ಅವರಿಗೆ ಮನೆಗಳ ಹಕ್ಕುಪತ್ರಗಳನ್ನು ನೀಡಿ ರಾಜ್ಯದ ಏಳಿಗೆಯಲ್ಲಿ ಪಾಲದಾರರನ್ನಾಗಿ ಮಾಡಿದೆ. ಆದರೆ ಕಾಂಗ್ರೆಸ್ ಸಮಾಜವನ್ನು ಜಾತಿ ಮತಗಳ ಪಂಥಗಳ ಹೆಸರಲ್ಲಿ ಒಡೆದು ತುಷ್ಟೀಕರಣ ಹೆಚ್ಚು ಮಾಡಿದೆ. ಬಿಜೆಪಿ ಸರ್ಕಾರ ಬಿದರಿ ಕಲೆ ಖ್ಯಾತಿಯ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಪದ್ಮ ಪುರಸ್ಕಾರ ಕೊಟ್ಟಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ಅವರಿಗೆ ಬರೇ ನೋವು ನಿರಾಶೆಯೇ ಕೊಟ್ಟಿತ್ತು. ಬೀದರ್ ಒಂದು ತೀರ್ಥಸ್ಥಳ. ಗೋರ್ಟಾದಲ್ಲಿನ ರೈತರ ಬಲಿದಾನ ಕಾಂಗ್ರೆಸ್ ಮರೆತುಹೋಗಿತ್ತು. ಅಲ್ಲಿದ್ದ ಕಲ್ಲಿನ ಸ್ಮಾರಕದ ಧೂಳನ್ನೂ ಸ್ವಚ್ಛ ಮಾಡಿರಲಿಲ್ಲ. ಆದ್ರೆ ಈಗ ಅಲ್ಲಿ ದೊಡ್ಡದೊಂದು ಸ್ಮಾರಕ ಎದ್ದು ನಿಂತಿದೆ ಮತ್ತು ಸದಾ ಕಾಲ ತಿರಂಗ ಹಾರಾಡುತ್ತಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಸ್ಥಿರ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರ ಬಂದಿದ್ದರ ಪರಿಣಾಮ ಕರ್ನಾಟಕದ ಜನರು ನೋಡಿದ್ದಾರೆ. ಅಸ್ಥಿರ ಸರ್ಕಾರ ಬಂದರೆ ಜನರಿಗೆ ಯಾವುದೇ ಕಾರ್ಯಕ್ರಮ ತಲುಪುವುದಿಲ್ಲ. ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ದಯೆಯಿಂದ ಸರ್ಕಾರ ನಡೆಯುತ್ತಿದೆ ಎಂದು ಆ ಪಕ್ಷದ ನಾಯಕರು ಹೇಳಿದ್ದರು. ಸಾಮಾನ್ಯ ಮನುಷ್ಯನ ಬಗ್ಗೆ ಮಾತನಾಡಿದರೆ ಅವರನ್ನು ಕಾಂಗ್ರೆಸ್ ದ್ವೇಷಿಸುತ್ತೆ. ಭ್ರಷ್ಟಾಚಾರ ತೋರಿಸುವವರ ಬಗ್ಗೆ ಕಾಂಗ್ರೆಸ್ ದ್ವೇಷ ಖಾಯಂ ಆಗುತ್ತದೆ. ಈ ಚುನಾವಣೆ ಸಂದರ್ಭದಲ್ಲಿ ನನಗೆ ಮತ್ತೆ ಬೈಯುವ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರು ನನಗೆ ಬೈದಿರುವ ಪಟ್ಟಿ ಇದೆ. ಇದುವರೆಗೂ ನನ್ನನ್ನು 91 ಬಾರಿ ಬೈದಿದ್ದಾರೆ. ನನ್ನನ್ನು ಬೈಯ್ಯುವುದರಲ್ಲೇ ಸಮಯ ವ್ಯರ್ಥ ಮಾಡುವುದರ ಬದಲು ಒಳ್ಳೆಯ ಆಡಳಿತ ಕೊಟ್ಟಿದ್ದರೆ ಇಂದು ಕಾಂಗ್ರೆಸ್ಗೆ ಇಂತಹ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಯಾರು ದೇಶಕ್ಕೆ ಮತ್ತು ಬಡವರಿಗೆ ಕೆಲಸ ಮಾಡುತ್ತಾರೆ ಅವರಿಗೆ ಅವಮಾನ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಹಿಂದಿನ ಚುನಾವಣೆಯಲ್ಲಿ ಚೌಕೀದಾರ್ ಚೋರ್ ಎಂದರು. ನಂತರ ಮೋದಿ ಕಳ್ಳ ಎಂದರು. ನಂತರ ಒಬಿಸಿ ಸಮಾಜವೇ ಕಳ್ಳರು ಎಂದರು. ಕರ್ನಾಟಕದಲ್ಲಿ ಈಗ ಚುನಾವಣೆ ಶುರು ಆಗುತ್ತಿದೆ. ಈ ಸಂದರ್ಭದಲ್ಲಿ ಲಿಂಗಾಯಿತರನ್ನು ಕಳ್ಳರು ಎನ್ನುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಅವರೇ ಕಿವಿ ಕೊಟ್ಟು ಕೇಳಿ. ನೀವು ಯಾವ ಯಾವಾಗ ಯಾರಿಗೆ ಬೈದಿದ್ದೀರೋ ಅವರು ನಿಮಗೆ ಮತ್ತೆ ಎದ್ದು ನಿಲ್ಲಲಾಗದಂತಹ ಶಿಕ್ಷೆ ಕೊಟ್ಟಿದ್ದಾರೆ. ಈ ಬಾರಿ ಕರ್ನಾಟಕದಲ್ಲೂ ನಮ್ಮ ಸಹೋದರರ ಮರ್ಯಾದೆಯನ್ನು ಪ್ರಶ್ನೆ ಮಾಡಿರುವ ಬೈಗುಳಕ್ಕೆ ಅವರು ತಕ್ಕ ಉತ್ತರ ಮತಗಳ ಮೂಲಕ ನೀಡಲಿದ್ದಾರೆ. ಕಾಂಗ್ರೆಸ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೂ ನಿಂದಿಸದೇ ಬಿಟ್ಟಿಲ್ಲ. ಈ ಬಗ್ಗೆ ಅಂಬೇಡ್ಕರ್ ಅವರೇ ಒಮ್ಮೆ ಸಾರ್ವಜನಿಕವಾಗಿ ಕಾಂಗ್ರೆಸ್ ಅವರು ಬೈಯ್ಯುವುದಾಗಿ ಹೇಳಿದ್ದರು. ಕಾಂಗ್ರೆಸ್ ಅವರು ಅಂಬೇಡ್ಕರ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ, ವಂಚಕ ಎಂದೆಲ್ಲಾ ನಿಂದಿಸಿದ್ದಾರೆ. ಆಗಿನಿಂದಲೂ ಕಾಂಗ್ರೆಸ್ ಅವರು ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ ಬಂದಿದೆ. ಕಾಂಗ್ರೆಸ್ ವೀರ್ ಸಾವರ್ಕರ್ ಅವರಿಗೂ ಬೈಯುತ್ತಿದ್ದಾರೆ. ದೊಡ್ಡ ದೊಡ್ಡ ಮಹಾಪುರುಷರೂ ಅವರ ಬೈಗುಳಕ್ಕೆ ಶಿಕಾರಿಯಾಗಿದ್ದಾರೆ. ನನಗೂ ಅದೇ ರೀತಿ ಬೈಯುತ್ತಿದ್ದಾರೆ. ಕಾಂಗ್ರೆಸ್ ಬೈಯುವುದರಲ್ಲೇ ಸಮಯ ಕಳದರೆ ನಾನು ಜನತಾ ಜನಾರ್ಧನರ ಸೇವೆಯಲ್ಲಿ ತೃಪ್ತಿ ಪಡುತ್ತೇನೆ. ನಾನು ನಿಮಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದಿಂದ ಆ ಎಲ್ಲ ಬೈಗುಳಗಳು ಮಣ್ಣಲ್ಲಿ ಮಣ್ಣಾಗಲಿದೆ. ಕಾಂಗ್ರೆಸ್ ಅವರು ಬರೆದಿಟ್ಟುಕೊಳ್ಳಿ. ನೀವೆಷ್ಟು ನನ್ನನ್ನು ಬೈಯುತ್ತೀರೋ ಕಮಲ ಅಷ್ಟೇ ಹೆಚ್ಚು ಅರಳಲಿದೆ. ನಿಮ್ಮ ಆಶೀರ್ವಾದಿಂದ ಕರ್ನಾಟಕದ ಸೇವೆಯನ್ನು ಮಾಡವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ವೇಗದ ವಿಕಾಸಕ್ಕೆ ಬಿಜೆಪಿಗೆ ಪೂರ್ಣ ಬಹುಮತದ ಶಕ್ತಿಶಾಲಿ ಅವಶ್ಯಕತೆ ಇದೆ. ಆದ್ದರಿಂದಲೇ ನಾನು ಪದೇ ಪದೇ ಹೇಳುತ್ತೇನೆ, “ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ” ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದ ತಾಳಮೇಳ ಸಿಗಲು, ಮೂಲಸೌಕರ್ಯ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲು, ವಿದೇಶೀ ಹೂಡಿಕೆ ಹೆಚ್ಚು ಬರಲು, ಕಾಂಗ್ರೆಸ್ ಸರ್ಕಾರದ ಎಟಿಎಂ ಆಗದೇ ದೇಶದ ಬೆಳವಣಿಗೆಯ ಎಂಜಿನ್ ಆಗಲು, ಕೇಂದ್ರದ ಗರೀಬ್ ಕಲ್ಯಾಣ ಯೋಜನೆ ನಿಮ್ಮನ್ನು ತಲುಪಲು ಡಬಲ್ ಎಂಜಿನ್ ಸರ್ಕಾರ ಬರಬೇಕು. ನನಗೆ ವಿಶ್ವಾಸವಿದೆ, ನೀವೆಲ್ಲರೂ ಮೇ 10 ರಂದು ಚುನಾವಣಾ ಕೇಂದ್ರದಲ್ಲಿ ಕಮಲದ ಗುರುತಿಗೆ ಮತ ಹಾಕುತ್ತೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ. ಮನೆಮನೆಗೂ ತೆರಳಿ, ಬಿಜೆಪಿ ಸಾಧನೆಗಳನ್ನು ಪ್ರಚಾರ ಮಾಡಿ ಮತದಾನ ಮಾಡಿಸಿ. ನೀವು ನನಗಾಗಿ ಒಂದು ಕೆಲಸ ಮಾಡಿ. ನಿಮ್ಮ ಸೇವಕ ಮೋದಿ ಬೀದರ್ ಗೆ ಬಂದು ನಿಮಗೆ ನಮಸ್ಕಾರ ಮಾಡಿದರು ಎಂದು ಹೇಳಿ. ಇದರಿಂದ ನನಗೆ ಇನ್ನಷ್ಟು ಕೆಲಸ ಮಾಡಲು ಉತ್ಸುಕತೆ ಸಿಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು