ಜೂನ್ 1ರಿಂದ ಕರೆಂಟ್ ಬಿಲ್ ಕಟ್ಟಬೇಡಿ
ಸುದ್ದಿಮೂಲ ವಾರ್ತೆ,
ಮಂಡ್ಯ, ಏ.29: ಮೇ 15 ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಜೂನ್ 1 ರಿಂದ ಕರೆಂಟ್ ಬಿಲ್ ಕಟ್ಟಬೇಡಿ…
ಹೀಗೆ ರಾಜ್ಯದ ಜನರಿಗೆ ಅಭಯ ನೀಡಿದವರು ಕೆಪಿಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಮಳವಳ್ಳಿಯಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮೇ 15ರಿಂದ ಹೊಸ ಸರ್ಕಾರ ಬರುತ್ತದೆ. ಜೂನ್ 1ರಿಂದ ಕರೆಂಟ್ ಬಿಲ್ ಕಟ್ಟಬೇಡಿ. ವರ್ಷಕ್ಕೆ ಪ್ರತಿ ಕುಟುಂಬಕ್ಕೆ 24 ಸಾವಿರ ರೂಪಾಯಿ ಬರುತ್ತದೆ.
ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಕೊಡುತ್ತೇವೆ. ಬಡವರು ಹಸಿವಿನಿಂದ ಬಳಲಬಾರದು ಎಂದು 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಯಾಗಲಿದೆ. ಮಂಡ್ಯದಲ್ಲಿ ಕಳೆದ ಬಾರಿ ಒಂದು ಸೀಟು ಗೆಲ್ಲಲು ಆಗಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಕೋರಿದರು.
ಯುವಕರಿಗೆ ಕೆಲಸ ಕೊಡಲಾಗುವುದು ಎಂದು ಬಿಜೆಪಿ ಹೇಳಿತ್ತು. ಆದರೆ ಆಮೇಲೆ ಪಕೋಡ ಮಾರಿ ಅಂತ ಮೋದಿಯವರು ಹೇಳಿದರು. ಹೀಗಾಗಿ ಪದವಿ ಮಾಡಿರುವವರಿಗೆ ಪ್ರೋತ್ಸಾಹ ಧನ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದರು.
ಬಿ ಸೋಮಶೇಖರ್, ಜಗದೀಶ್ ಶೆಟ್ಟರ್, ಸವದಿ, ಗೋಪಾಲಕೃಷ್ಣರಂತಹ ಹಿರಿಯ ನಾಯಕರುಗಳು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾರಣ, ಈ ದೇಶದಲ್ಲಿ ಬದಲಾವಣೆ ತರುವ ಸಾಮರ್ಥ್ಯ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ನಂಬಿ ನಮ್ಮ ಪಕ್ಷ ಸೇರಿದ್ದಾರೆ.
ಮಂಡ್ಯ ಹಾಗೂ ಹಾಸನದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲ್ಲದಿದ್ದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರ ಕ್ಷೇತ್ರ ಹಾಗೂ ಪಂಚಾಯತಿ ಸದಸ್ಯರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನ ಆಯ್ಕೆ ಮಾಡಿದ್ದಾರೆ. ಶ್ರೀಕಂಠೇಗೌಡರು ತಾವು ಸೋಲುತ್ತೇವೆ ಎಂದು ಹೇಳಿ ತಮ್ಮ ಸ್ಥಾನ ತ್ಯಾಗ ಮಾಡುತ್ತಾರೆ. 17 ಜೆಡಿಎಸ್ ಶಾಸಕರಿದ್ದರೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಧುಮಾದೇಗೌಡ ಹಾಗೂ ದಿನೇಶ್ ಗೂಳಿಗೌಡರು ಗೆಲವು ಸಾಧಿಸುತ್ತಾರೆ. ಈ ಮತದಾರರು ದಡ್ಡರೋ, ಬುದ್ಧಿವಂತರೋ ನೀವೇ ಆಲೋಚಿಸಿ ಎಂದರು.
ಕೆ.ಆರ್ ಪೇಟೆ ದೇವರಾಜ್, ಸೋರಬದ ಮಧು ಬಂಗಾರಪ್ಪ, ಅರಸಿಕೆರೆ ಶಿವಲಿಂಗೇಗೌಡರು, ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಸೇರಿದಂತೆ 20ಕ್ಕೂ ಹೆಚ್ಚು ಜನ ನಾಯಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿಗೆ ಜೆಡಿಎಸ್ ಪಕ್ಷದ ಆಂತರಿಕ ಪರಿಸ್ಥಿತಿ ನೀವು ಅರ್ಥ ಮಾಡಿಕೊಳ್ಳಬೇಕು. ನರೇಂದ್ರಸ್ವಾಮಿ ಅಥವಾ ನಾನು ನೋವು ಮಾಡಿದ್ದರೆ ನೀವು ನಮ್ಮನ್ನು ಕ್ಷಮಿಸಬೇಕು. ನಾವು ನೀವೆಲ್ಲ ಖರ್ಗೆ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.