ಸುದ್ದಿಮೂಲ ವಾರ್ತೆ
ತುಮಕೂರು, ಏ.29: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನ
ಗುರಿಯನ್ನು ಹೊಂದಲಾಗಿದೆ ಎಂದು ತುಮಕೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜೈಪಾಲ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ, ಬೈಕ್ರ್ಯಾಲಿ, ಆಟೋ ಮೈಕ್ ಮೂಲಕ ಮತದಾರರ ಜಾಗೃತಿ ಗೀತೆಗಳ ಪ್ರಚಾರ, ಸಹಿ ಸಂಗ್ರಹ ಅಭಿಯಾನ ಸೇರಿದಂತೆ ಪ್ರತಿ ಗ್ರಾಮಗಳಲ್ಲಿ ಮತದಾನ ಜಾಗೃತಿಗಾಗಿ ಜಾಥ, ಮನೆ-ಮನೆ ಭೇಟಿ, ನಮ್ಮ ನಡೆ ಮತದಾರರಿಗೆ ಮತಗಟ್ಟೆ ತೋರಿಸುವ ಕಡೆ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಇನ್ನೂ ವಿಶೇಷವಾಗಿ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ರಂಗುರಂಗಿನ ಚಿತ್ತಾರದೊಂದಿಗೆ ಅಲಂಕಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸ್ವೀಪ್ ಕಾರ್ಯಕ್ರಮದಡಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಯುವಕ, ಯುವತಿಯರಿಗೆ, ವಯೋವೃದ್ದರಿಗೆ, ವಿಶೇಷ ಚೇತನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಪಿಂಕ್
ಬಣ್ಣದಿಂದ ಅಲಂಕೃತಗೊಂಡ ಸಖೀ ಮತಗಟ್ಟೆ, ಹಸಿರು ಬಣ್ಣದಿಂದ ಶೃಂಗಾರಗೊಂಡ ಪರಿಸರ ಸ್ನೇಹಿ ಮತಗಟ್ಟೆ, ವಿಶೇಷ ಚೇತನರ ಸ್ನೇಹಿ, ಪ್ರಕೃತಿ ಮತ್ತು ವನ್ಯಜೀವಿ, ಯುವ ಮತದಾರರು, ಕಲ್ಪತರು ಮಾದರಿ ಮತಕೇಂದ್ರ, ಸೇಲ್ಪಿ ಪಾಯಿಂಟ್ ವಿವಿಧ ವಿಷಯಾಧಾರಿತ ಮಾಹಿತಿಯನ್ನೊಳಗೊಂಡ ವರ್ಣರಂಜಿತ ಗೋಡೆ
ಬರಹಗಳನ್ನು ಬರೆಯುವ ಮೂಲಕ ಸಜ್ಜುಗೊಳಿಸಲಾಗಿದೆ.
ಇನ್ನೂ ನನ್ನ ಮತ ಮಾರಟಕ್ಕಿಲ್ಲ, ಮತದಾನ ನಮ್ಮ ಹಕ್ಕು, ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ, ಯುವಕ, ಯುವತಿಯರೇ ದೇಶದ ಭವಿಷ್ಯ ಎಂಬ ಗೋಡೆ ಬರಹದ ಸಾಲುಗಳೊಂದಿಗೆ ಮತದಾನದ ಮಹತ್ವ ಸಾರಲಾಗಿದೆ ಎಂದು ಅವರು ತಿಳಿಸಿದ್ದಾರೆ.