ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ಅಬ್ಬರದ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳಲ್ಲಿ ಬಲ ತುಂಬಿದರು.
ಬೆಳಗಾವಿಯಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿ ಅವರು ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಬಿಐಇಸಿ ಬಳಿ ಬಂದಿಳಿದರು. ಅಲ್ಲಿಂದ ಕಾರಿನ ಮೂಲಕ ನೈಸ್ ರಸ್ತೆ ಜಂಕ್ಷನ್ ತಲುಪಿದರು. ತೆರೆದ ಲಾರಿ ಹತ್ತಿದರು. ನೈಸ್ ರಸ್ತೆ ಜಂಕ್ಷನ್ ನಿಂದ ಸುಮಾರು 5.30 ಕಿಲೋ ಮೀಟರ್ ದೂರ ಮಾಗಡಿ ರಸ್ತೆಯ ಸುಮ್ಮನಹಳ್ಳಿಯವರೆಗೂ ಮೋದಿ ರೋಡ್ ಶೋ ನಡೆಸಿದರು. ಬಿಜೆಪಿ ಹಿರಿಯ ಮುಖಂಡರಾದ ಡಿ. ವಿ. ಸದಾನಂದಗೌಡ ಹಾಗೂ ಛಲವಾದಿ ನಾರಾಯಣ ಸ್ವಾಮಿ ಮೋದಿ ಅವರಿಗೆ ಸಾಥ್ ನೀಡಿದರು.
ಮೋದಿ ಅವರನ್ನು ನೋಡಲು ರಸ್ತೆಯ ಇಕ್ಕೆಲ್ಲಗಳಲ್ಲಿ ಭಾರೀ ಜನಸ್ತೋಮವೇ ನೆರೆದಿತ್ತು. ರಸ್ತೆಯುದ್ದಕ್ಕೂ ಕಟ್ಟಡಗಳ ಮೇಲೆ ಜನರು ನೆರೆದಿದ್ದರು. ಮೋದಿ.. ಮೋದಿ.. ಎಂಬ ಘೋಷಣೆ ಮುಗಿಲು ಮಟ್ಟಿತ್ತು. ಬಿಜೆಪಿ ಕಾರ್ಯಕರ್ತರು ಮೋದಿ ಅವರತ್ತ ಹೂ ಮಳೆಗರೆದರು. ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನೈಸ್ ರೋಡ್ ಜಂಕ್ಷನ್, ಈಸ್ಟ್ ವೆಸ್ಟ್ ಕಾಲೇಜ್ ಜಂಕ್ಷನ್, ಆದಿಶ್ವರ ಜಂಕ್ಷನ್, ಸುಮನಹಳ್ಳಿ ಜಂಕ್ಷನ್ ಮೂಲಕ ರೋಡ್ ಶೋ ಹಾದು ಹೋಯಿತು. ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಸಾಂಸ್ಕೃತಿಕ ಕಲಾತಂಡಗಳ ಆಯೋಜನೆ ಮಾಡಲಾಗಿದೆ. ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸಂಜೆ 6ರ ಸುಮಾರುಗೆ ಆರಂಭವಾದ ರೋಡ್ ಶೋ 7.30ರವರೆಗೂ ನಡೆಯಿತು. ಸುಮಾರು ಒಂದೂವರೆ ತಾಸು ಮೋದಿ ಜನರತ್ತ ನಗುಮೊಗದಿಂದಲೇ ಕೈ ಬೀಸಿದರು. ಬಳಿಕ ಕೊಟ್ಟಿಗೆ ಪಾಳ್ಯದ ಜಂಕ್ಷನ್ನಲ್ಲಿ ರೋಡ್ ಶೋ ಅಂತ್ಯವಾಯಿತು. ಅಲ್ಲಿಂದ ಮೋದಿ ಕಾರಿನಲ್ಲಿ ತೆರಳಿದರು.
ಬೆಂಗಳೂರಿನಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ, ಭಾನುವಾರ ಕೋಲಾರ, ಚನ್ನಪಟ್ಟಣ ಮತ್ತು ಮೈಸೂರಿನಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನಾಲ್ಕು ಕ್ಷೇತ್ರಕ್ಕೆ ಆನೆಬಲ:
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ನಾಲ್ಕು ಕ್ಷೇತ್ರಗಳಿಗೆ ಆನೆಬಲ ಬಂದಂತಾಗಿದೆ ಎಂದು ಸಚಿವ ಮತ್ತು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಒಂಬತ್ತು ಕ್ಷೇತ್ರಗಳಿಂದ ಸುಮಾರು ಎರಡೂವರೆ ಲಕ್ಷ ಜನ ಮೋದಿ ರೋಡ್ ಶೋ ನೋಡಲು ಭಾಗಿಯಾಗಿದ್ದರು ಎಂದು ಹೇಳಿದರು.
‘ಮೋದಿ ಯಾವ ರಾಜ್ಯಕ್ಕೆ ಹೋಗುತ್ತಾರೋ ಆ ರಾಜ್ಯ ಅಭಿವೃದ್ಧಿಯಾಗುತ್ತದೆ, ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ,’ ಎಂದು ಸಚಿವ ಮತ್ತು ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಅಭಿಪ್ರಾಯಪಟ್ಟಿದ್ದಾರೆ.