ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಯೂಸೂಫ್ ಷರೀಫ್ (ಕೆ.ಜಿ.ಎಫ್ ಬಾಬು) ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಉದಯ್ ಗರುಡಾಚಾರ್ ನಡುವೆ ರಹಸ್ಯ ಒಪ್ಪಂದವಾಗಿದ್ದು, ಇಬ್ಬರೂ ನಾಯಕರು ಚುನಾವಣಾ ಸತ್ ಸಂಪ್ರದಾಯಗಳನ್ನು ಗಾಳಿಗೆ ತೂರಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಜಾಕ್ ಆರೋಪಿಸಿದ್ದಾರೆ.
ಏ. 27 ರಂದು ಕೆ.ಜಿ.ಎಫ್ ಬಾಬು ಅವರು ಬೆಂಗಳೂರಿನಲ್ಲಿ ಡಾ. ಉದಯ್ ಗರುಡಾಚಾರ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಭರ್ಜರಿ ಬಿರಿಯಾನಿ ಭೋಜನ ಕೂಟ ನಡೆಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಜಿ.ಎಫ್ ಬಾಬು ಅವರು ಬಿಜೆಪಿ ಅಭ್ಯರ್ಥಿಯನ್ನು ಭೇಟಿ ಮಾಡಿದ ಛಾಯಾಚಿತ್ರಗಳು ಮತ್ತು ವಿಡಿಯೋ ಬಿಡುಗಡೆ ಮಾಡಿದ ಅವರು, ಇದು ನಿಜಕ್ಕೂ ಕಳವಳಕಾರಿ ಸಂಗತಿ ಎಂದರು.
ಇದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾನಸಿಕವಾಗಿ ಆಘಾತವಾಗಿದೆ. ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿ ಆಯೋಗವನ್ನು ದಾರಿ ತಪ್ಪಿಸಿರುವ ಕೆ.ಜಿ.ಎಫ್ ಬಾಬು, ಇದೀಗ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಜನ ಸಾಮಾನ್ಯರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ. ಈತನ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಅಬ್ದುಲ್ ರಜಾಕ್ ಮನವಿ ಮಾಡಿದರು.