ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಲೆಕ್ಕ ನೀಡುತ್ತಿದ್ದಾರೆ. ಅದರ ಬದಲು ಅವರ ಡಬಲ್ ಇಂಜಿನ್ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಲೆಕ್ಕ ಹೇಳಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಜೆಡಿಎಸ್, ಬಿಜೆಪಿ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜತೆ ಭಾನುವಾರ ಮಾತನಾಡಿದರು.
ರಾಜ್ಯಕ್ಕೆ ಪ್ರಧಾನಿಗಳು, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಂದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ವಿಶ್ವಗುರು ಎಂದೇ ಕರೆದುಕೊಳ್ಳುವ ಮೋದಿ ಅವರು ಅಷ್ಟು ದೊಡ್ಡ ಸ್ಥಾನದಲ್ಲಿದ್ದು, ಅವರು ರಾಜ್ಯಕ್ಕೆ ಬಂದು ಅವರ ವಿರುದ್ಧದ ಟೀಕೆಗಳ ಲೆಕ್ಕ ಹೇಳುತ್ತಿದ್ದಾರೆ. ಆದರೆ ರಾಜ್ಯದ ಜನ ಅವರ ಸಾಧನೆ, ಅಭಿವೃದ್ಧಿ ಕಾರ್ಯಕ್ರಮಗಳ ಲೆಕ್ಕ ಹೇಳುತ್ತಾರೆ ಎಂದು ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಕೋವಿಡ್ ಸಂದರ್ಭದಲ್ಲಿ 20 ಲಕ್ಷ ಕೋಟಿ ಪ್ಯಾಕೆಜ್ ಘೋಷಣೆ ಮಾಡಿದ್ದು ಯಾವ ವರ್ಗದವರಿಗೆ ಎಷ್ಟು ಪರಿಹಾರ ನೀಡಲಾಗಿದೆ, ಕೋವಿಡ್ ಮೃತರಿಗೆ, ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಎಷ್ಟು ಪರಿಹಾರ ನೀಡಿದ್ದಾರೆ ಎಂಬ ಲೆಕ್ಕ ನೀಡಲೇ ಇಲ್ಲ. ಈ ವಿಚಾರವಾಗಿ ಮಾತನಾಡಿದ್ದಾರೆ ಅವರಿಗೆ ಗೌರವ ಇರುತ್ತಿತ್ತು. ಮೋದಿ ಅವರು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಅವರಿಗೂ ರಾಜ್ಯ ಚುನಾವಣೆಗೆ ಏನು ಸಂಬಂಧ? ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಅವರ ಮುಖ ನೋಡಿ ಮತ ನೀಡಬೇಕು ಎಂದು ಕೇಳಿದರು.
ಬೊಮ್ಮಾಯಿ, ಯಡಿಯೂರಪ್ಪ, ಅವರ ಮಂತ್ರಿಗಳ ಸಾಧನೆ ಬಗ್ಗೆ ಮಾತನಾಡುತ್ತಿಲ್ಲ. ದಕ್ಷ ಆಡಳಿತಕ್ಕೆ ಹೆಸರಾಗಿರುವ ಕರ್ನಾಟಕ ರಾಜ್ಯದಲ್ಲಿ ಇವರು ತಮ್ಮ ಆಡಳಿತ ಹೇಗಿತ್ತು ಎಂಬುದನ್ನು ಹೇಳುತ್ತಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಆದರೆ ರಾಜ್ಯದಲ್ಲಿ ನಾಯಕತ್ವವನ್ನು ಬಿಂಬಿಸಬೇಕಲ್ಲವೆ. ಬಿಜೆಪಿ ಇಂತಹ ದುಸ್ಥಿತಿಗೆ ಬಂದಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.