ಸುದ್ದಿಮೂಲ ವಾರ್ತೆ
ಮೈಸೂರು, ಏ. 30: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಭಾನುವಾರ ಸಂಜೆ ಪ್ರಧಾನಿ ಮೋದಿ ಅವರದ್ದೇ ಹವಾ.. ದರ್ಬಾರ್… ದಟ್ಟ ಮೋಡ ಕವಿದ ವಾತಾವರಣ… ಎಲ್ಲಿ ಮಳೆರಾಯ ಧರೆಗೆ ಸುರಿಯುವನೋ ಎಂಬ ಆತಂಕ ಬಿಜೆಪಿ ಸಂಘಟಕರಲ್ಲಿ ಇತ್ತು. ಮಳೆ ಬರಲಿಲ್ಲ. ತಂಪನೆ ವಾತಾವರಣದಲ್ಲಿ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿ, ಜನಮನ ಸೆಳೆದರು.
ಸಂಜೆ 5.35ಕ್ಕೆ ಆಗಮಿಸಿದ ಕೂಡಲೇ ಭಾರಿ ಭದ್ರತೆ ನಡುವೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರೋಡ್ ಶೋ ಮಾಡಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ಪ್ರಧಾನಿ ಅವರು, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಗಳ ಮೂಲಕ ದಸರಾದ ಜಂಬೂಸವಾರಿ ಮೆರವಣಿಗೆ ಹಾದುಹೋಗುವ ರಾಜಮಾರ್ಗದಲ್ಲಿ ರೋಡ್ ಶೋ ನಡೆಸುತ್ತ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ರೋಡ್ ಶೋ ಮಾರ್ಗದಲ್ಲಿ ಸುಮಾರು ಲಕ್ಷ ಜನರು ಭಾಗವಹಿಸಿದ್ದರು ಎಂದು ಅಂದಾಜು ಮಾಡಲಾಗಿದೆ. ಗನ್ಹೌಸ್ ವೃತ್ತದಿಂದ ಬಸವೇಶ್ವರ ವೃತ್ತ, ಚಾಮರಾಜ ಜೋಡಿರಸ್ತೆ, ನಗರಪಾಲಿಕೆ ರಸ್ತೆ, ಕೆ.ಆರ್. ವೃತ್ತ, ಆಯುರ್ವೇದ ವೃತ್ತ, ಬಂಬೂಬಜಾರ್ ರಸ್ತೆ, ಹೈವೇ ಸರ್ಕಲ್, ಎಲ್ಐಸಿ ಸರ್ಕಲ್ನಲ್ಲಿ ರೋಡ್ ಶೋ ಅಂತ್ಯವಾಯಿತು.
ಕಾಡಾ ಕಚೇರಿ ಆವರಣ, ದೇವರಾಜ ಮಾರುಕಟ್ಟೆ ಮುಂಭಾಗ ಮತ್ತು ಶಾಲೆಯ ಆವರಣದಲ್ಲಿ ಹಿರಿಯ ನಾಗರಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಸಾಂಪ್ರದಾಯಿಕ ಉಡುಗೆ ಧರಿಸಿ ಭಾಗವಹಿಸಿದ್ದರು.. ಜೊತೆಗೆ ಜಾನಪದ ಕಲಾ ತಂಡಗಳ ಪ್ರದರ್ಶನವೂ ನಡೆಯಿತು. ಕೋಲಾರ, ಚನ್ನಪಟ್ಟಣ ಹಾಗೂ ಹಾಸನದ ಬೇಲೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಳಿಕ ಪ್ರಧಾನಿ ಮೋದಿ ಮೈಸೂರಿನತ್ತ ಆಗಮಿಸಿದರು.
ಮೈಸೂರಿನ ಸಂಪ್ರದಾಯದಂತೆ ನೂರಕ್ಕೂ ಹೆಚ್ಚು ನಾದ ಸ್ವರ, ಪೂರ್ಣಕುಂಭಗಳೊಂದಿಗೆ ಪ್ರಧಾನಿ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಾಲ್ಕು ಕಿ.ಮೀ ರೋಡ್ ಶೋ ನಡೆಯಿತು. ಸುಮಾರು 25 ಕಲಾತಂಡಗಳು ಈ ರೋಡ್ ಶೋನಲ್ಲಿ ಭಾಗವಹಿಸುವ ಮೂಲಕ ಮೆರಗನ್ನು ನೀಡಿದವು. ನಾದಸ್ವರ ಹಾಗೂ ಮಹಿಳೆಯರಿಂದ ಪೂರ್ಣ ಕುಂಭ ಹಾಗು ಭರತ ನಾಟ್ಯ ,ಸಂಸ್ಕೃತ ಪಾಠಶಾಲೆ ಹತ್ತಿರ ಸ್ಯಾಕ್ಸ್ ಫೋನ್, ಮಹಾನಗರ ಪಾಲಿಕೆ ಮುಂದೆ ಚಿಲಿಪಿಲಿ ಗೊಂಬೆ, ಕೆಆರ್ ಸರ್ಕಲ್ ನ ಹತ್ತಿರ ನಗಾರಿ ಬನ್ನಿಮಂಟಪದ ಹತ್ತಿರ ಡೊಳ್ಳು ಕುಣಿತ, ಕೆಎಸ್ಆರ್ಟಿಸಿ ಮುಂದೆ ಪೂಜಾ ಕುಣಿತ, ಮಾರ್ಕೆಟ್ ಮುಂದೆ ಸೋಮನ ಕುಣಿತ, ಬನ್ನಿಮಂಟಪದ ಎಡ ಬಲ ಭಾಗದಲ್ಲಿ ಪಟ್ಟದ ಕುಣಿತ ಹಾಗೂ ವೀರಭದ್ರ ಕುಣಿತ ,ಹೈವೆ ಸರ್ಕಲ ಹತ್ತಿರ ಕಂಸಾಳೆ ಕಲಾವಿದರಿಂದ ಗಾಯನ ನಡೆಸಿದರು.
ಮೋದಿಯತ್ತ ತೂರಿಬಂದ ಮೊಬೈಲ್
ರೋಡ್ ಶೋ ನಡೆಸುತ್ತಿದ್ದ ನರೇಂದ್ರ ಮೋದಿಯತ್ತ ಅಭಿಮಾನಿಯೊಬ್ಬ ಹೂ ಜೊತೆಗೆ ಮೊಬೈಲ್ ಸಹ ಸೇರಿ ಎಸೆದಿದ್ದಾನೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ತೆರೆದ ವಾಹನದಲ್ಲಿ ಕೈಬೀಸುತ್ತಾ ಮೋದಿ ಸಾಗಿದ್ದರು. ಆಗ ಇದ್ದಕ್ಕಿದ್ದಂತೆ ಹಿಂದಿನಿಂದ ಮೊಬೈಲ್ವೊಂದು ತೂರಿಬಂತು. ಮೋದಿಯವರ ಕೈ ತಾಗದೆ ಪಕ್ಕದಲ್ಲಿಯೇ ಬಂದು ಲಾರಿಯ ಮೇಲೆ ಬಿದ್ದಿತು. ಮೋದಿ ಕೆಲ ಕ್ಷಣ ಆತಂಕದಿಂದ ಅದನ್ನು ಗಮನಿಸಿದರು. ಬಳಿಕ ಅದು ಕೆಳಕ್ಕೆ ಬಿದ್ದಿತು.