ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ದೇಶದ ಜನರೊಂದಿಗೆ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಂಮೋದಿ ಅವರು ಭಾನುವಾರ ತಮ್ಮ 100ನೇ ‘ಮನ್ ಕಿ ಬಾತ್’ ಪೂರೈಸಿದರು. ಈ ವೇಳೆ ಮನ್ ಕಿ ಬಾತ್ ನನಗೆ ಕೇವಲ ಒಂದು ಕಾರ್ಯಕ್ರಮ ಮಾತ್ರವಲ್ಲ, ಪೂಜೆ, ನಂಬಿಕೆ ಮತ್ತು ವ್ರತವಿದ್ದಂತೆ ಎಂದು ಹೇಳಿದರು.
ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ನರೇಂದ್ರ ಮೋದಿ ತಮ್ಮ ಚುನಾವಣಾ ಅಬ್ಬರದ ಪ್ರಚಾರದ ಮಧ್ಯೆಯೂ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಉದ್ದೇಶಿಸಿ ಮಾತನಾಡಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನ ಕೆಲವು ಕ್ಷಣಗಳನ್ನು ನೆನೆದರು. ಆಗ ಜನತೆಯೊಂದಿಗೆ ಮಾತನಾಡಲು, ಅವರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುತ್ತಿತ್ತು. ಏಕಾಏಕಿ ಪ್ರಧಾನಿಯಾಗಿ ದೆಹಲಿಗೆ ಬಂದ ಬಳಿಕ ಏನೋ ಖಾಲಿ ಖಾಲಿ ರೀತಿ ಭಾಸವಾಗುತ್ತಿತ್ತು ಎಂದು ಹೇಳಿದ ಅವರು, ಪ್ರೋಟೋಕಾಲ್ನಿಂದಾಗಿ ಜನರ ಮಧ್ಯೆ ತೆರಳಿ ಕಷ್ಟಗಳನ್ನು ಆಲಿಸುವುದು ಸಾಧ್ಯವಿಲ್ಲ, ಆಗ ಈ ಮನ್ ಕೀ ಬಾತ್ ಶುರು ಮಾಡುವ ಬಗ್ಗೆ ಆಲೋಚನೆ ಬಂದಿತ್ತು, ಈಗ ದೇಶಾದ್ಯಂತ ಇರುವ ಜನರನ್ನು ತಲುಪಲು ಸಾಧ್ಯವಾಗಿದೆ. ಈ ಬಗ್ಗೆ ನನಗೆ ಹೆಮ್ಮೆ ಇದೆ ಸಂತಸವನ್ನ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಕುರಿತು ಮಾತನಾಡಿದ ಮೋದಿ, ದೇಶದಲ್ಲಿ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಮ್ಮ ಪ್ರಾಕೃತಿಕ ಸಂಪತ್ತೇ ಇರಲಿ, ನದಿಗಳಿರಲಿ, ಪರ್ವತಗಳಿರಲಿ, ಕೊಳಗಳಿರಲಿ ಅಥವಾ ಯಾತ್ರಾಸ್ಥಳಗಳಿರಲಿ, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ಇತ್ತ ಮನ್ ಕಿ ಬಾತ್ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪೆನ್ಸಿಲ್ ಮತ್ತು ಸ್ಲೇಟ್ ವ್ಯಾಪಾರ ಮಾಡುವ ಮಂಜೂರ್ ಅಹ್ಮದ್ ಎಂಬ ವ್ಯಕ್ತಿಯೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ಪೆನ್ಸಿಲ್ ಸ್ಲೇಟ್ ಉದ್ಯಮವು ಉತ್ತಮವಾಗಿ ನಡೆಯುತ್ತಿದೆ ಎಂದು ಮಂಜೂರ್ ಅಹ್ಮದ್ ಹೇಳಿದರು.
ಕಾರ್ಯಕ್ರಮದಲ್ಲಿ ನೀವು ಜಮ್ಮು ಮತ್ತು ಕಾಶ್ಮೀರದಲ್ಲಿ ಪೆನ್ಸಿಲ್ ಮತ್ತು ಸ್ಲೇಟ್ ವ್ಯಾಪಾರ ಪ್ರಸ್ತಾಪಿಸಿದಾಗಿನಿಂದ, ಪೆನ್ಸಿಲ್ ವ್ಯಾಪಾರವು ಚೆನ್ನಾಗಿ ನಡೆಯುತ್ತಿದೆ. ಸದ್ಯ ಇಲ್ಲಿ 200 ಮಂದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ನೀಡಲಾಗುವುದು ಎಂದರು.
ಹಿಮಾಲಯವನ್ನು ಕಸ ಮುಕ್ತ ಮಾಡುವಲ್ಲಿ ನಿರತರಾಗಿರುವ ಪ್ರದೀಪ್ ಸಾಂಗ್ವಾನ್ ಅವರ ಅಭಿಯಾನವು ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. 2020 ರಲ್ಲಿ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸುವ ಮೊದಲು ಸಾಕಷ್ಟು ಸಮಸ್ಯೆ ಇತ್ತು. ಆದರೆ ಇದಾದ ನಂತರ ಜನರ ಬೆಂಬಲ ಸಿಕ್ಕಿತು ಮತ್ತು ಜನ ಸೇರುತ್ತಲೇ ಇದ್ದಾರೆ. ಒಂದು ವರ್ಷದಲ್ಲಿ ಮಾಡಿದ ಕೆಲಸ ಈಗ ಒಂದು ದಿನದಲ್ಲಿ ಆಗುತ್ತಿದೆ ಎಂದರು.
ಇದೇ ವೇಳೆ ತಮಿಳುನಾಡು ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಹಿಳೆಯರು ಇಲ್ಲಿನ ನದಿಗೆ ಮರುಜೀವ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಮಲದ ನಾರುಗಳಿಂದ ಬಟ್ಟೆ ತಯಾರಿಸುವ ಮಣಿಪುರದ ವಿಜಯಶಾಂತಿ ದೇವಿ ಮಾತನಾಡಿದ್ದು, ಮೋದಿ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದು, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನೀಡಲಾಗಿದೆ ಎಂದು ಮಹಿಳೆ ಹೇಳಿದರು.