ಸುದ್ದಿಮೂಲ ವಾರ್ತೆ
ಬೆಳಗಾವಿ, ಏ.30: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರರ್ತೆಯರ ಗೌರವಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕಾಂಗ್ರೆಸ್ನ ಮತ್ತೊಂದು ಭರವಸೆ ಘೋಷಿಸಿದರು.
ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಡಿದರು.
ರಾಜ್ಯದಲ್ಲಿ 1.5 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದು, ಅವರಿಗೆ ಪಿಂಚಣಿ ಸೌಲಭ್ಯ ಇಲ್ಲ. ಹೀಗಾಗಿ ಅವರ ವೇತನ ಹೆಚ್ಚಳ ಅನಿವಾರ್ಯ ಎಂದು ಅಭಿಪ್ರಾಯಪಟ್ಟ ಪ್ರಿಯಾಂಕ ಗಾಂಧಿ, ಅಂಗನವಾಡಿ ಸಹ ಕಾರ್ಯಕರ್ತೆಯರ ವೇತನವನ್ನು 7,500 ರೂ.ಗಳಿಂದ 10,000ಕ್ಕೆ ಮತ್ತು ಆಶಾ ಕಾರ್ಯಕರ್ತೆಯರ ವೇತನ 5 ಸಾವಿರ ರೂ.ಗಳಿಂದ 8 ಸಾವಿರ ರೂ.ಗಳಿಗೆ ಹಾಗೂ ಬಿಸಿಯೂಟ ನೌಕರರ ಗೌರವ ಧನ 3,700 ರೂ.ನಿಂದ 5000 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಆಡಳಿತ ಕುಸಿದಿದೆ:
ರಾಜ್ಯ ಬಿಜೆಪಿ ಸರ್ಕಾರ ನಿಯತ್ತು ಆರಂಭದಲ್ಲಿಯೇ ಹಾಳಾಗಿದ್ದು, ಇದರಿಂದ ಆಡಳಿತ ಕುಸಿದಿದೆ. ಜನರು ಆರಿಸಿದ ಸರ್ಕಾರವನ್ನು ಶಾಸಕರ ಖರೀದಿ ಮೂಲಕ ಬೀಳಿಸಿ ಬಿಜೆಪಿಯವರು ಸರ್ಕಾರ ರಚಿಸಿದ್ದಾರೆ. ಇಬ್ಬರು ಮುಖ್ಯಮಂತ್ರಿಗಳು ಬಂದರು. ಪರಿಣಾಮ ಅಭಿವೃದ್ಧಿ ಸ್ಥಗಿತವಾಗಿತ್ತು. ಈ ಸರ್ಕಾರ ಎಲ್ಲ ಹಂತದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.
ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೇಶಾದ್ಯಂತ ಕುಖ್ಯಾತಿ ಪಡೆದಿದೆ. ಇನ್ನು ದೇಶದಲ್ಲಿ ಬೆಲೆ ಏರಿಕೆ ಎಗ್ಗಿಲ್ಲದೆ ಸಾಗಿದೆ. ಅಡುಗೆ ಸಿಲಿಂಡರ್ 1100 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜಿಎಸ್ ಟಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಸಂಸಾರ ನಿಭಾಯಿಸುವುದು ಬಹಳ ಕಷ್ಟವಾಗಿದೆ. ಇದರಿಂದ ಮಹಿಳೆಯರು ಬಹಳ ಸಂಕಷ್ಟವಾಗಲಿದೆ. ರೈತರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೃಷಿಯ ಪ್ರತಿ ಸಲಕರಣೆ ಮೇಲೆ ಜಿಎಸ್ ಟಿ ವಿಧಿಸಲಾಗಿದೆ. ಇದರ ಮಧ್ಯೆ ರೈತ ಶ್ರಮವಹಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು.
ಇಲ್ಲಿರುವ ಯುವಕರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾವುದನ್ನು ಸರ್ಕಾರ ತುಂಬಿಲ್ಲ. ಎಲ್ಲಾ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯ ನಾಶ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ.
ಬಿಜೆಪಿ ಎಂದು ಕೊಟ್ಟ ಮಾತಿಗೆ ತಕ್ಕಂತೆ ನಡೆಯುವುದಿಲ್ಲ. ಕಾಂಗ್ರೆಸ್ ಕೊಟ್ಟ ಭರವಸೆ ಈಡೆರಿಸಿವೆ. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ, ಹಿಮಾಚಲ ಪ್ರದೇಶದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ ಎಂದು ಪ್ರಿಯಾಂಕ ಮನವರಿಕೆ ಮಾಡಿಕೊಟ್ಟರು.