ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.1: ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಇದ್ದು, ನೀವು ನಿಮ್ಮ ಸರ್ಕಾರವನ್ನು ಆರಿಸಬೇಕಾಗಿದೆ. ಕಳೆದ ಚುನಾವಣೆಯಲ್ಲಿ ನೀವು ಬಿಜೆಪಿ ಸರ್ಕಾರವನ್ನು ಆರಿಸಿರಲಿಲ್ಲ. ಆದರೆ ಬಿಜೆಪಿ ಶಾಸಕರನ್ನು ಹಣದ ಮೂಲಕ ಖರೀದಿ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಸರ್ಕಾರ ರಚಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೇವಲ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈ ಸರ್ಕಾರವನ್ನು 40% ಸರ್ಕಾರ ಎಂದು ಕರೆಯುತ್ತಾರೆ.
ಈ ಸರ್ಕಾರದಲ್ಲಿ ಯಾವುದೇ ಕೆಲಸ ಆಗಬೇಕಾದರೂ 40% ಕಮಿಷನ್ ಲೂಟಿ ಮಾಡುತ್ತಾರೆ. ಸರ್ಕಾರದ ಕೆಲಸ ಎಂದರೆ ಜನರಿಗೆ ಅವರ ಹಣವನ್ನು ನೀಡುವುದಾಗಿದೆ. ಸರ್ಕಾರದ ಕೆಲಸ ಶಿಕ್ಷಣೆ, ಆರೋಗ್ಯ, ರಸ್ತೆ ಅಭಿವೃದ್ಧಿಯಲ್ಲಿ ಹಣ ವಿನಿಯೋಗಿಸುವುದಾಗಿದೆ. ಆದರೆ ಬಿಜೆಪಿ ಸರ್ಕಾರ ಹಣ ಹಾಕಲಿಲ್ಲ, ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು, ಕಾರ್ಮಿಕರ ಜೇಬಿನಿಂದ ಹಣ ಲೂಟಿ ಮಾಡಿದ್ದಾರೆ.
ಪ್ರತಿ ಕೆಲಸದಲ್ಲಿ 40% ಲೂಟಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಗೊತ್ತಿಲ್ಲದ ವಿಚಾರವಲ್ಲ. ಪ್ರಧಾನಮಂತ್ರಿಗಳಿಗೆ ಎಲ್ಲವೂ ಗೊತ್ತಿದೆ. ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ ಕರ್ನಾಟಕದಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಪತ್ರ ಬರೆದಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿಗಳು ಮಠಗಳಿಗೆ 30% ಕಮಿಷನ್ ಪಡೆಯಲಾಗಿದೆ ಎಂದಿದ್ದಾರೆ. ಪಿಎಸ್ಐ, ಸಹಕಾರಿ ಬ್ಯಾಂಕ್, ಸಹಾಯಕ ಪ್ರಾಧ್ಯಾಪಕರು, ಜೆಇಇ ಸೇರಿದಂತೆ ಎಲ್ಲಾ ನೇಮಕಾತಿಗಳಲ್ಲಿ ಅಕ್ರಮವಾಗಿದೆ. ಬಿಜೆಪಿ ಶಾಸಕರೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು 2500 ಕೋಟಿಗೆ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ. ಕರ್ನಾಟಕದ ಮಕ್ಕಲಿಗೆಈ ಭ್ರಷ್ಟಾಚಾರದ ಬಗ್ಗೆ ಗೊತ್ತಿರುವಾಗ, ಪ್ರಧಾನಿಗೂ ಗೊತ್ತಿರುತ್ತದೆ.
ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿರುವುದು ಗೊತ್ತಿದ್ದರೂ ಇದನ್ನು ತಡೆಯಲು ಪ್ರಧಾನಮಂತ್ರಿಗಳು ಯಾವ ಕ್ರಮ ಕೈಗೊಂಡಿದ್ದಾರೆ? ನೀವು ಈ ಲೂಟಿ ನಿಲ್ಲುವ ಪ್ರಯತ್ನ ಮಾಡಿದ್ದೀರಾ? ಭ್ರಷ್ಟರನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ ಯಾಕೆ? ಆದರೆ ಈಗ ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬಂದು ಮತ ಕೇಳುತ್ತಿದ್ದೀರಿ. ಈ ಸಮಯದಲ್ಲಿ ನೀವು ಭ್ರಷ್ಟಾಚಾರ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸ್ಪಷ್ಟನೆ ನೀಡಬೇಕು. ಕರ್ನಾಟಕಿಂದ ಬರುವ ತೆರಿಗೆಯಲ್ಲಿ ಸಿಗಬೇಕಾದ ಪಾಲು ರಾಜ್ಯಕ್ಕೆ ಸಿಗುತ್ತಿಲ್ಲ. ಅದು ಯಾಕೆ ಎಂದು ಜನರಿಗೆ ಹೇಳಿ. ಕರ್ನಾಟಕದಲ್ಲಿ ನೆರೆ ಬಂದಾಗ ಜನರಿಗಾಗಿ ಏನು ಪರಿಹಾರ ನೀಡಿದ್ದೀರಿ?
ಗೋವಾ, ಮಹಾರಾಷ್ಟ್ರ, ಕರ್ನಾಟಕ ನಡುವೆ ಗೊಂದಲವಿರುವ ನದಿ ನೀರು ಹಂಚಿಕೆ ವಿಚಾರವಾಗಿ ಇರುವ ಗೊಂದಲದಲ್ಲಿ ನೀವು ಯಾವ ರೀತಿಯ ಸಹಾಯ ಮಾಡಿದ್ದೀರಿ? ಚುನಾವಣೆ ಸಮಯದಲ್ಲಿ ಬಂದು ನೀವು ರಾಜ್ಯದ ಬಗ್ಗೆ ಮಾತನಾಡುವ ಬದಲು ನಿಮ್ಮ ಮಾತನ್ನು ಹೇಳುತ್ತೀರಿ. ಕಳೆದ ಮೂರು ವರ್ಷಗಳಿಂದ ನಿಮ್ಮ ಸರ್ಕಾರ ಏನು ಮಾಡಿದೆ ಎಂದು ಹೇಳಿ. ಮುಂದಿನ ಐದು ವರ್ಷಗಳಲ್ಲಿ ಏನು ಮಾಡುತ್ತೇವೆ ಎಂದು ಹೇಳಿ. ಯುವಕರು, ಆರೋಗ್ಯ, ಶಿಕ್ಷಣ, ಭ್ರಷ್ಟಾಚಾರ ನಿರ್ಮೂಲನೆ, ಮೂಲಸೌಕರ್ಯ ಅಭಿವೃದ್ಧಿಗೆ ಏನು ಮಾಡುತ್ತೀರಿ ಎಂದು ಹೇಳಿ. ಈ ಚುನಾವಣೆ ನಿಮಗಾಗಿ ನಡೆಯುತ್ತಿರುವುದಲ್ಲ, ಈ ಚುನಾವಣೆ ಕರ್ನಾಟಕ ಹಾಗೂ ಅದರ ಜನರ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ.
ನೀವು ಚುನಾವಣೆ ,ಮಯದಲ್ಲಿ ಬಂದು ಕಾಂಗ್ರೆಸ್ ನವರು ನನ್ನ ವಿರುದ್ದ 91 ಬಾರಿ ಆಕ್ರಮಣ ಮಾಡಿದ್ದಾರೆ ಎಂದು ಹೇಳುತ್ತೀರಿ. ಆದರೆ ನೀವು ಕರ್ನಾಟಕಕ್ಕಾಗಿ ನೀವು ಏನು ಮಾಡಿದ್ದೀರಿ ಎಂದು ಹೇಳುತ್ತಿಲ್ಲ. ನಿಮ್ಮ ಮುಂದಿನ ಭಾಷಣಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಜನರಿಗೆ ಏನು ಮಾಡಿದ್ದೀರಿ? ಮುಂದೆ ಐದು ವರ್ಷಗಳಲ್ಲಿ ಏನು ಮಾಡುತ್ತೀರಿ ಎಂದು ಹೇಳಿ.
ನಾವು ಇಲ್ಲಿಗೆ ಬಂದಾಗ, ಸಿದ್ದರಾಮಯ್ಯ ಏನು ಮಾಡಿದ್ದಾರೆ, ಡಿ.ಕೆ. ಶಿವಕುಮಾರ್ ಅವರು ಏನು ಮಾಡಲಿದ್ದಾರೆ ಎಂಬ ವಿಚಾರವನ್ನು ನಾವು ಚರ್ಚೆ ಮಾಡುತ್ತೇವೆ. ನಾವು ನಮ್ಮ ಎಲ್ಲಾ ನಾಯಕರ ಹೆಸರು ಹೇಳುತ್ತೇವೆ. ಆದರೆ ನೀವು ಬಂದರೆ ನಿಮ್ಮ ಮುಖ್ಯಮಂತ್ರಿಗಳ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಿಮ್ಮ ಭಾ,ಣ ಕೇವಲ ಮೋದಿ ಅವರ ಬಗ್ಗೆ ಮಾತ್ರ ಆಗಿರುತ್ತದೆ. ನೀವು ನಿಮ್ಮ ಭಾಷಣದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಹೆಸರು ಪ್ರಸ್ತಾಪಿಸಿ, ಅವರಿಗೂ ಖುಷಿಯಾಗಲಿ. ನಾವು ಅಧಿಕಾರಕ್ಕೆ ಬಂದರೆ, ರೈತರು, ಯುವಕರು, ಬಡವರಿಗಾಗಿ ಏನು ಮಾಡುತ್ತೇವೆ ಎಂದು ನಾನು ಹೇಳುತ್ತೇನೆ.
ಕಳೆದ ಮೂರು ವರ್ಷಗಳಲ್ಲಿ ಲಕ್ಷಾಂತರ ಕೋಟಿ ನಿಮ್ಮಂದ ಲೂಟಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳ ಕಾಲ ನಿಮ್ಮ ಹಣವನ್ನು ನಿಮಗೆ ಹಿಂತಿರುಗಿಸುತ್ತೇವೆ. ಬಿಜೆಪಿ ಲೂಟಿ ಮಾಡಿರುವ ಅಷ್ಟೂ ಹಣವನ್ನು ನಿಮ್ಮ ಜೇಬಿಗೆ ತುಂಬಿಸುವ ಕೆಲಸ ಮಾಡುತ್ತೇವೆ. ಬಿಜೆಪಿ ಮಾಡಿದ ಲೂಟಿಯಲ್ಲಿ ಅತಿ ಹೆಚ್ಚಿನ ಲೂಟಿ ಮಾಡಿರುವುದು ಮಹಿಳೆಯರ ಹಣ. ಒಂದೆಡೆ 40% ಕಮಿಷನ್ ಲೂಟಿ ಮಾಡಿದೆ, ಮತ್ತೊಂದೆಡೆ ಅವರು ಬೆಲೆ ಏರಿಕೆ ಮೂಲಕ ನಿಮ್ಮ ಜೇಬನ್ನು ಲೂಟಿ ಮಾಡಿದ್ದಾರೆ. ತಮ್ಮ ಸ್ನೇಹಿತರಿಗೆ ನೆರಕವಾಗಲು ದೇಶದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ. ಹೀಗಾಗಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ನೀಡುತ್ತೇವೆ, ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ. ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಉಚಿತ ನೀಡಲಾಗುವುದು. ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ, ಜಿಎಸ್ ಟಿ ಹಾಗೂ ನೋಟು ರದ್ಧತಿಯಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಬಿಜೆಪಿ ಕಾಲೇಜು ವಿವಿಗಳನ್ನು ಖಾಸಗೀಕರಣ ಮಾಡಿದ್ದು, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದು ಸತ್ಯ.
ಇದಕ್ಕಾಗಿ ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ಪ್ರತಿ ತಿಂಗಳು 2 ವರ್ಷಗಳ ಕಾಲ ನಿರುದ್ಯೋಗ ಭತ್ಯೆ ನೀಡಲಾಗುವುದು. ಇವು ನಮ್ಮ ಐದು ಗ್ಯಾರಂಟಿ ಯೋಜನಗಳು.
ಮೋದಿ ಅವರೇ ನೀವು ನಮ್ಮ ಯೋಜನೆಗಳನ್ನು ಟೀಕಿಸುವುದಾದರೆ, ನೀವು ರಾಜ್ಯಕ್ಕಾಗಿ ಏನು ಮಾಡಲು ಹೊರಟಿದ್ದೀರಿ ಎಂದು ಹೇಳಿ. ಈ ಚುನಾವಣೆ ರಾಜ್ಯದ ಜನರು, ಯುವಕರು, ಮಹಿಳೆಯರು ಹಾಗೂ ಮಕ್ಕಳ ವಿಚಾರವಾಗಿದೆ. ಈ ಚುನಾವಣೆ ಕೇವಲ ಒಬ್ಬ ವ್ಯಕ್ತಿ ಅಥವಾ ಮೋದಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲ. ಇದು ಮೋದಿ ಅವರಿಗೆ ಅರ್ಥವಾಗಬೇಕಿದೆ. ಬಿಜೆಪಿಯವರಿಗೆ 40ರ ಸಂಖ್ಯೆ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ ಇವರಿಗೆ 40ಕ್ಕಿಂತ ಹೆಚ್ಚಿನ ಸೀಟುಗಳನ್ನು ನೀಡಬೇಡಿ. ಕಾಂಗ್ರೆಸ್ ಪಕ್ಷವನ್ನು ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು. ಕಾರಣ, ಬಿಜೆಪಿ ಈಗ ನಿಮ್ಮಿಂದ ಲೂಟಿ ಮಾಡಿರುವ ಹಣದಲ್ಲಿ ಮುಂದಿನ ಸರ್ಕಾರವನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ನೀವು 150 ಸೀಟು ನಮಗೆ ಕೊಟ್ಟರೆ, ಬಿಜೆಪಿ ನಮ್ಮ ಶಾಸಕರನ್ನು ಕದಿಯಲು ಸಾಧ್ಯವಾಗುವುದಿಲ್ಲ.