ಮೈಸೂರು, ಮೇ 1: ಹಳೇ ಮೈಸೂರು ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಜೋಡೋ, ಪಂಚರತ್ನ, ಜಯವಾಹಿನಿ ಯಾತ್ರೆಗಳು ನಡೆದು, ಆಯಾ ಪಕ್ಷಗಳ ಅಖಂಡ, ಪ್ರಕಾಂಡ ಮುಖಂಡರೆಲ್ಲಾ ತಮ್ಮ ತಮ್ಮ ಪಕ್ಷಗಳ ಪರ ಯಾರಿಗೂ ಕಡಿಮೆ ಇಲ್ಲದಂತೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಚುನಾವಣೆ ಬಹಿರಂಗ ಪ್ರಚಾರ ಮುಗಿಯಲು ಏಳೇ ದಿನಗಳ ಬಾಕಿ ಇವೆ. ಈ ಭಾಗದಲ್ಲಿ ಮೂರು ಪಕ್ಷಗಳಿಗೆ ಹೆಚ್ಚು ಸ್ಥಾನಗಳನ್ನು ಗಳಿಸುವ ಅನಿರ್ವಾಯತೆ ಇಂದು ಹೆಚ್ಚಿದೆ. ಅದರಲ್ಲೂ ಜೆಡಿಎಸ್ಗೆ ಇದು ಅಳಿವು ಉಳಿವಿನ ಪ್ರಶ್ನೆ ಎಂಬಂತಾಗಿದೆ.
ಹಳೇ ಮೈಸೂರು ವ್ಯಾಪ್ತಿಯಲ್ಲಿ ಇರುವ 9 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ ತನ್ನದೇ ಆದ ಪ್ರಾಬಲ್ಯವನ್ನು 1983 ರಿಂದಲೂ ಸಾಧಿಸಿಕೊಂಡು ಬಂದಿರುವ ಜೆಡಿಎಸ್ಗೆ ಈ ಚುನಾವಣೆ ಹಿಂದಿನಂತೆ ಇಲ್ಲ. ಇದು ಆ ಪಕ್ಷದ ಅಳಿವು-ಉಳಿವಿನ ಪ್ರಶ್ನೆಯೇ ಸರಿ. 1985 ರಿಂದ 2018ರ ಚುನಾವಣೆವರೆಗೂ ಜೆಡಿಎಸ್ ಎದುರಿಸಿ ನಿಂತಿದ್ದು ಕಾಂಗ್ರೆಸ್ ಅನ್ನೇ. ಆದರೆ 2023ರ ಚುನಾವಣೆಯಲ್ಲಿ ಬಿಜೆಪಿಯನ್ನೂ ಸಹ ತನ್ನ ಸಂಪ್ರದಾಯ ಎದುರಾಳಿ ಕಾಂಗ್ರೆಸ್ ಜೊತೆ ಎದುರಿಸಬೇಕಿದೆ.
ಹಿಂದಿನ ಬಹತೇಕ ಚುನಾವಣೆಗಳಲ್ಲಿ ಈ ಭಾಗದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸ್ಥಿತಿಯಲ್ಲೇನು ಇರಲಿಲ್ಲ. ಇದು ಜೆಡಿಎಸ್ಗೆ ಅನುಕೂಲವಾಗುತ್ತಿತ್ತು. ಆದರೆ ಈಗ ಆಗಿಲ್ಲ. ಬಿಜೆಪಿ, ಜೆಡಿಎಸ್ ಪ್ರಾಬಲ್ಯ ಇರುವ ಜಿಲ್ಲೆಗಳಾದ ಮೈಸೂರು, ಹಾಸನ, ಮಂಢ್ಯ, ತಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಹೂಡಿದೆ.
ಈ ಜಿಲ್ಲೆಗಳಲ್ಲಿ ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳಿಗೆ ತನು, ಮನ, ಧನವನ್ನು ಧಾರೆ ಎರೆಯುತ್ತಿದೆ. ಇದು ಜೆಡಿಎಸ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಎಂದೇ ಹೇಳಬಹುದು.
ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಘಟಾನುಘಟಿಗಳಲ್ಲೆಲ್ಲಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಏಕೆಂದರೆ, ಹಿಂದಿನ ಚುನಾವಣಿಯಲ್ಲಿ ಉತ್ತರ ಕರ್ನಾಟಕದಲ್ಲಿ ಗಳಿಸಿದ ಸ್ಥಾನಗಳನ್ನು ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮೈಸೂರು ಭಾಗದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲೇ ಬೇಕಾಗಿದೆ.
ಈ ಕಾರಣದಿಂದಲೇ ಇತ್ತ ಹೆಚ್ಚು ಗಮನವನ್ನು ಕೇಂದ್ರೀಕರಿಸಿದೆ. ಕಾಂಗ್ರೆಸ್ ಕೂಡ ಗೆಲ್ಲಲು ಬೇಕಾದ ಎಲ್ಲಾ
ತಂತ್ರಗಾರಿಕೆ ಮತ್ತು ಪ್ರಚಾರ ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲ ಜೆಡಿಎಸ್ಗೆ ಅನುಕೂಲವಾಗಿದೆ. ಇದರ ಪರಿಣಾಮ ಬಹುತೇಕ ಕಡೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಉತ್ತರ ಕರ್ನಾಟಕದ ಆನೇಕ ಕಡೆ ಸ್ಪರ್ಧೆ ಒಡ್ಡುಬಹುದಾಂತರ ಅಭ್ಯರ್ಥಿಗಳು ಸಿಕ್ಕಿದೆ. ಇದು ಜೆಡಿಎಸ್ ಮಟ್ಟಿಗೆ ಸಮಾಧಾನಕರವಾದ ಸಂಗತಿ.
ಕಾಂಗ್ರೆಸ್ ಕೂಡ ಶತಾಯಗತಾಯ ಹೆಚ್ಚು ಸ್ಥಾನ ಪಡೆಯಬೇಕೆಂಬ ಹಿನ್ನೆಲೆಯಲ್ಲಿ ಹೋರಾಟ ನಡೆಸುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಿರತ ಯತ್ನ ಹಾಕುತ್ತಿದ್ದಾರೆ. 2018 ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ 118 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಪಡೆದಿದಿತ್ತು. ಹಾಸನ ಜಿಲ್ಲೆಯಲ್ಲಿ 7 ಕ್ಕೆ 7, ಮಂಡ್ಯ ಜಿಲ್ಲೆಗಳ ಎಲ್ಲಾ 7 ಸ್ಥಾನಗಳನ್ನು, ಮೈಸೂರಿನಲ್ಲಿ 11 ಕ್ಕೆ 5, ರಾಮನಗರದಲ್ಲಿ 4 ಕ್ಕೆ 3, ತಮಕೂರಿನಲ್ಲಿ 11 ಕ್ಕೆ 4, ಚಿಕ್ಕಬಳ್ಳಾಪುರದಲ್ಲಿ 5 ಕ್ಕೆ 1, ಕೋಲಾರದಲ್ಲಿ 6 ಕ್ಕೆ 1 ಸ್ಥಾನಗಳನ್ನು ಗಳಿಸಿತ್ತು. ಕೊಡಗು, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿತ್ತು.