ಸುದ್ದಿಮೂಲ ವಾರ್ತೆ
ಮೈಸೂರು, ಮೇ 2: ವರುಣ ಕ್ಷೇತ್ರದ ಮತದಾರರೇ, ತಮ್ಮ ಪಕ್ಷದಿಂದ ಸ್ಪರ್ಧಿಸಿರುವ ವಿ.ಸೋಮಣ್ಣನವರನ್ನು ಗೆಲ್ಲಿಸಿ ಅವರನ್ನು ರಾಜ್ಯದದೊಡ್ಡ ವ್ಯಕ್ತಿಯನ್ನಾಗಿ ಮಾಡ್ತೀವಿ. ಈ ನನ್ನ ಮಾತು ಸುಳ್ಳಲ್ಲ….
ಹೀಗೆಂದು ಮಂಗಳವಾರ ವರುಣ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಬಿಜೆಪಿಯ ಸೂತ್ರಧಾರ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಇದರ ಅರ್ಥ ಸೋಮಣ್ಣನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೋ ಅಥವಾ ಕೇಂದ್ರದಲ್ಲಿ ಅತ್ಯುನ್ನತ ಸ್ಥಾನ ಮಾನ ಕೊಡುತ್ತಾರೋ ಎಂದು ತಿಳಿಕೊಳ್ಳಬೇಕೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಯಾವ ರೀತಿಯಾಗಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳದಿದ್ದರೂ ಮಗುಮ್ಮಾಗಿ ರಾಷ್ಟ್ರೀಯ ಪಕ್ಷ ಮುಖಂಡರು ಹೀಗೆ ಹೇಳಿರುವುದು ರಾಜಕೀಯವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿ ವರುಣ ಜನ ವಿ.ಸೋಮಣ್ಣರನ್ನು ಗೆಲ್ಲಿಸಿ ವರುಣ ಕ್ಷೇತ್ರದ ಅಭಿವೃದ್ದಿ ಆಗತ್ತೆ, ಸೋಮಣ್ಣ ದೊಡ್ಡ ವ್ಯಕ್ತಿಯಾಗಿ ನಿಮ್ಮ ಹತ್ತಿರ ಬರುತ್ತಾರೆ ಎಂದು ಪರೋಕ್ಷವಾಗಿ ಸಿಎಂ ಮಾಡುವ ಸುಳಿವೇ ಇದು ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.
ಇದೇ ವೇಳೆ ಅವರು ನೇರವಾಗಿ ಲಿಂಗಾಯಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಹೇಳದಿದ್ದರೂ, ಕಾಂಗ್ರೆಸ್ ಲಿಂಗಾಯಿತರಿಗೆ ಭಾರಿ ಅನ್ಯಾಯ ಮಾಡಿದೆ ಎಂದು ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಅಮಿತ್ ಷಾ, ಲಿಂಗಾಯತ ಸಮಾಜಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಈ ಹಿಂದೆಯೂ ನಿಜಲಿಂಗಪ್ಪ ವೀರೇಂದ್ರ ಪಾಟೀಲ್ ಗೆ ಕಾಂಗ್ರೆಸ್ ಅಪಮಾನ ಮಾಡಿದ್ದನ್ನು ಜನತೆ ಮರೆಯಬಾರದು ಎಂದು ಕಿಡಿಕಾರಿದರು.
ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಲು ಸಿದ್ದರಾಮಯ್ಯ ಡಿಕೆಶಿ ಹೊರಟಿದ್ದಾರೆ. ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಅಂತಾರೆ ದೇಶಕ್ಕೆ ಮೊದಲ ಕೃಷಿ ಬಜೆಟ್ ಕೊಟ್ಟಿದ್ದು ಯಡಿಯೂರಪ್ಪ ನೆನಪಿರಲಿ. ನಾವು ಮುಸ್ಲಿಂ ಮೀಸಲಾತಿ ತೆಗೆದು ಬೇರೆ ಸಮಾಜಕ್ಕೆ ಕೊಟ್ಟಿದ್ದೇವೆ ಇದು ಸರೀನಾ ತಪ್ಪಾ ನೀವೇ ತೀರ್ಮಾನಿಸಬೇಕು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಲಿಂಗಾಯತ ಹಾಗೂ ಎಸ್. ಟಿ ಮೀಸಲಾತಿ ತೆಗೆಯಲು ಮುಂದಾಗುತ್ತಾರೆ ನೆನಪಿಡಿ ಎಂದು ಗುಡುಗಿದರು.
ಓಡಿ ಹೋಗ್ತಾರೆ
ಸಿದ್ಧರಾಮಯ್ಯಗೆ ಸೋಲಿನ ಭಯ ಶುರುವಾಗಿದೆ. ಸಿದ್ದರಾಮಯ್ಯ ಅಭಿವೃದ್ದಿ ಮಾಡಲ್ಲ ಓಡಿ ಹೋಗ್ತಾರೆ. ಹೀಗಾಗಿ ವಿ.ಸೋಮಣ್ಣರಿಗೆ ಹೆಚ್ಚು ಮತ ನೀಡಿ ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ಚಾಮುಂಡೇಶ್ವರಿ, ವರುಣ ಅ ಮೇಲೆ ಬಾದಾಮಿ ಕ್ಷೇತ್ರ ಪ್ರತಿ ಚುನಾವಣೆಯಲ್ಲೂ ಒಂದೊಂದು ಕ್ಷೇತ್ರ ಬದಲಾವಣೆ ಮಾಡುತ್ತಾರೆ . ಸಿದ್ದರಾಮಯ್ಯ ಅವರೆ ನೀವು ಯಾಕೆ ಪದೇ ಪದೇ ಕ್ಷೇತ್ರ ಬದಲಾಯಿಸುತ್ತೀರಿ. ವರುಣಾ ಮತದಾರರೇ ನಿವೃತ್ತಿ ಹೊಂದುವ ನಾಯಕ ಬೇಕಾ ಅಥವಾ ಭವಿಷ್ಯದ ಬಗ್ಗೆ ಯೋಜಿಸುವ ನಾಯಕ ಬೇಕಾ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ.
ವರುಣಾ ಜನರು ಸಿದ್ದರಾಮಯ್ಯಗೆ ಮತ ನೀಡಬೇಡಿ. ವಿ ಸೋಮಣ್ಣ ಅವರನ್ನು ಗೆಲ್ಲಿಸಿದರೇ, ವರುಣಾವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ. ಹೀಗಾಗಿ ಸೋಮಣ್ಣ ಅವರನ್ನ ಶಾಸಕರಾಗಿ ಆಯ್ಕೆ ಮಾಡಬೇಕು . ಸೋಮಣ್ಣ ಅತಿ ಹೆಚ್ಚು ಮತಗಳಿಂದ ಗೆಲ್ಲಬೇಕು ಎಂದು ಹೇಳಿದರು.