ಚಿಕ್ಕಬಳ್ಳಾಪುರ, ಮೇ 4: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಪ್ರಾಮಾಣಿವಾಗಿ ಕಾರ್ಯನಿರ್ವಹಿಸಿ ಪಾರದರ್ಶಕ ಆಡಳಿತವನ್ನು ನಡೆಸಿದ್ದೇನೆ. ಯಾವುದಾದರೂ ಭ್ರಷ್ಟಚಾರದ ಆರೋಪಗಳಿದ್ದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸವಾಲು ಹಾಕಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜನರ ಆಶೀರ್ವಾದ ಪಡೆದುಕೊಂಡು ಚುನಾವಣೆಯಲ್ಲಿ ಗೆಲ್ಲುವ ಬದಲಿಗೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಮಾಜಿ ಶಾಸಕರು ಡೀಲ್ ಆಗಿದ್ದಾರೆ, ಮುಂದಿನ ಕೆಲ ದಿನಗಳಲ್ಲಿ ಪ್ರಚಾರ ನಿಲ್ಲಿಸುತ್ತಾರೆ ಂದು ಸುಳ್ಳು ವದಂತಿಗಳನ್ನು ಸೃಷ್ಠಿಸಿ ಮತದಾರರು ದಿಕ್ಕುತಪ್ಪಿಸುತ್ತಿದ್ದಾರೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.
ಮಾನ ಮರ್ಯಾದೆ ಇದ್ದರೇ ತಾಕತ್ತು ಇದ್ದರೇ ಚುನಾವಣೆಯನ್ನು ಎದುರಿಸಿ ಜನರ ವಿಶ್ವಾಸವನ್ನು ಪಡೆದುಕೊಂಡು ಗೆಲ್ಲಲಿ. ನನ್ನ ಮೇಲೆ ಯಾವುದಾದರೂ ಭ್ರಷ್ಟಚಾರದ ಆರೋಪವನ್ನು ಸಾಬೀತುಪಡಿಸಿದರೆ ಚುನಾವಣೆ ಕಣದಿಂದ ನಿವೃತ್ತಿ ಆಗುತ್ತೇನೆ. ನಾನು ನಿಮ್ಮ ಸಚಿವರ (ಡಾ.ಕೆ.ಸುಧಾಕರ್) ಭ್ರಷ್ಟಚಾರ ಸಾಬೀತುಪಡಿಸಲು ಸಿದ್ದನಿದ್ದೇನೆ ಎಂದು ಬಹಿರಂಗವಾಗಿ ಸವಾಲು ಹಾಕಿದರಲ್ಲದೆ ತಾಕತ್ತು ಇದ್ದರೇ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಭಾವುಕರಾದ ಮಾಜಿ ಶಾಸಕರು:
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮಾಡಿರುವ ಸೇವಾ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇನೆ. ಆದರೂ ನನ್ನ ಬಗ್ಗೆ ಅಪಪ್ರಚಾರ ಮಾಡುವ ಕೆಲಸವನ್ನು ವಿರೋಧಿಗಳು ನಿಲ್ಲಿಸಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನಗೆ ಬೆಂಬಲಿಸಿ ಎಂದು ಮನವಿ ಮಾಡುವ ವೇಳೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಜಿಪಂ ಮಾಜಿ ಸದಸ್ಯ ಕೆಸಿ ರಾಜಕಾಂತ್, ಕೊಳುವನಹಳ್ಳಿ ಮುನಿರಾಜು, ಮಟ್ಟಮ್ಮಪ್ಪ, ಅಂಗರೇಕನಹಳ್ಳಿ ರವಿಕುಮಾರ್, ಮಂಚನಬೆಲೆ ಮಧು, ಡ್ಯಾನ್ಸ್ ಸೀನ, ಚಿನ್ನಪ್ಪ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.