ಸುದ್ದಿಮೂಲ ವಾರ್ತೆ
ಮೈಸೂರು, ಮೇ 4: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಹನುಮ ಜನ್ಮಸ್ಥಳವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಯ ನೀಡಿದ್ದಾರೆ.
ಗುರುವಾರ ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ನಂತರ ಮಾತನಾಡಿದ ಅವರು, ಬಿಜೆಪಿ ಅವರು ಈ ವಿಚಾರವನ್ನು ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿದೆ. ನಮ್ಮ ಪ್ರಣಾಳಿಕೆ ಕಂಡು ಬಿಜೆಪಿಯವರು ಗಾಬರಿಯಾಗಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಬಜರಂಗದಳ ಒಂದು ಸಂಘಟನೆ. ಹುಟ್ಟಿದ ಕುರುಗಳೆಲ್ಲಾ ಬಸವ ಆಗುವುದಿಲ್ಲ ಎಂದು ವ್ಯಾಖ್ಯಾನಿಸಿದರು.
ಅದೇ ರೀತಿ ಆಂಜನೇಯನ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಹನುಮಂತನಾಗುವುದಿಲ್ಲ. ಅವರು ಹನುಮಂತನ ಹೆಸರಿಟ್ಟುಕೊಂಡು ಸಂಘಟನೆ ಮಾಡಿ ನೈತಿಕ ಪೊಲೀಸ್ ಗಿರಿ ಮಾಡಿಕೊಂಡು ಬಂದಿದ್ದಾರೆ. ಯಾರು ಸಮಾಜದಲ್ಲಿ ಕಾನೂನು ಕೈಗೆತ್ತಿಕೊಂಡು ಅಶಾಂತಿ ಮೂಡಿಸುತ್ತಾರೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದೇವೆ ಎಂದು ಸಮರ್ಥಿಸಿಕೊಂಡರು.
ನಾವು ಕೂಡ ಹನುಮಂತನ ಭಕ್ತರು. ರಾಮನ ತಂದೆ ದಶರಥನ ದೇವಾಲಯ ಇಲ್ಲ. ಆದರೆ ರಾಮನ ಭಂಟ ಹನುಮಂತನ ದೇವಾಲಯ ಎಲ್ಲೆಡೆ ಇದೆ. ಈ ನಾಡಿನಲ್ಲಿ ಹನುಮಂತ ಹುಟ್ಟಿದ್ದಾನೆ. ಅದಕ್ಕೆ ಶಕ್ತಿ ತುಂಬಲು ನಾವು ಬದ್ಧವಾಗಿದ್ದು, ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಎಲ್ಲಾ ಪ್ರಮುಖ ಆಂಜನೇಯ ದೇವಾಲಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತದೆ.ಆಂಜನೇಯನ ಹೆಸರಲ್ಲಿ ಪ್ರತಿ ತಾಲೂಕಿನಲ್ಲಿ ಯುವಕರಿಗೆ ಕಾರ್ಯಕ್ರಮ ರೂಪಿಸಲಾಗಿವುದು ಎಂದರು.
ದೇವರ ಹೆಸರನ್ನು ರಾಜಕೀಯವಾಗಿ ಬಳಸಲು ಪ್ರಧಾನಿ ಹಾಗೂ ಬಿಜೆಪಿ ಯತ್ನಿಸುತ್ತಿದೆ. ಒಂದು ಆಂಜನೇಯನ ದೇವಾಲಯವನ್ನು ಬಿಜೆಪಿ ಅವರು ಕಟ್ಟಿದ್ದಾರಾ? ಯಾರಿಗೆ ಏನೂ ಸಹಾಯ ಮಾಡ್ದೆ ಅಂತಾ ಪ್ರಧಾನಿಗಳು ಹೇಳುತ್ತಿಲ್ಲ. ದೇವರನ್ನು ನಾನು ನಂಬಿದ್ದೇನೆ. ವೈಯಕ್ತಿಕವಾಗಿಯೂ ನನಗೆ ಫಲ ಸಿಗುತ್ತೆ ರಾಜ್ಯಕ್ಕೂ ಫಲ ಸಿಗುತ್ತದೆ ಎಂದು ಹೇಳಿದರು.
ರೋಡ್ ಶೋ
ಡಿ.ಕೆ. ಶಿವಕುಮಾರ್ ಚಾಮರಾಜ ಕ್ಷೇತ್ರ ಮತ್ತಿತರ ಕಡೆ ರೋಡ್ ಶೋ ನಡೆಸಿ ಮತಯಾಚಿಸಿದರು.