ಸುದ್ದಿಮೂಲ ವಾರ್ತೆ
ಆನೇಕಲ್, ಮೇ 5: ಚುನಾವಣೆಯಲ್ಲಿ ಹಣ ಹಂಚುವ ಹಾಗೂ ಹೆಂಡ ಕುಡಿಸುವ ಪರಿಪಾಠ ನಮ್ಮ ಪಕ್ಷದಲ್ಲಿ ಇಲ್ಲ. ಸಾತ್ವಿಕ ರೀತಿಯಲ್ಲಿ ತತ್ವ ಸಿದ್ಧಾಂತಗಳ ಮೂಲಕ ಚುನಾವಣೆಗಳನ್ನು ಎದುರಿಸುತ್ತೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಅನ್ಬುರಾಜ್ ಹೇಳಿದರು.
ಅತ್ತಿಬೆಲೆಯಲ್ಲಿ ಮತಯಾಚನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭ್ರಷ್ಟ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಹಣ ಕೊಳ್ಳೆ ಹೊಡೆಯುವುದು, ಧರ್ಮಗಳ ನಡುವೆ ಕಲಹ ತಂದಿಡುವುದು, ಜಾತಿ ರಾಜಕಾರಣ ಮಾಡುವುದು ಆ ಪಕ್ಷಗಳ ಕೆಲಸವಷ್ಟೆ. ಇವರಿಗೆ ಜನರ ಕಷ್ಟಸುಖಗಳು ಅರ್ಥವಾಗುವುದಿಲ್ಲ. ಆದರೆ ಕೆಆರ್ಎಸ್ ಪಕ್ಷ ಆಗಲ್ಲ. ಜನಸಾಮಾನ್ಯರ ಪಕ್ಷವಾಗಿದ್ದು ಭ್ರಷ್ಟಾಚಾರವನ್ನು ಹತ್ತಿಕ್ಕಲು, ರೈತರ ಭವಣೆ ನೀಗಿಸಲು ಕೆ.ಆರ್.ಎಸ್ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಉಪಾಧ್ಯಕ್ಷ ಮುರಳಿ ರೆಡ್ಡಿ ಮಾತನಾಡಿ, ಇಲ್ಲಿನ ಅಭ್ಯರ್ಥಿ ಅನ್ಬುರಾಜ್ ಅವರು ಮಾಜಿ ಸೈನಿಕರಾಗಿದ್ದಾರೆ. ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿ. ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತಾರೆ. ಆನೇಕಲ್ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಅವರ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ತಿಳಿಸಿದರು.
ಈ ರೀತಿಯ ಸರಳ ವ್ಯಕ್ತಿಗೆ ನಿಮ್ಮ ಮತದ ಅವಶ್ಯಕತೆ ಇದ್ದು, ಬಸವಣ್ಣನ ಕಲ್ಯಾಣ ಕರ್ನಾಟಕ, ಕುವೆಂಪು ಅವರ ಸರ್ವೋದಯ ಕರ್ನಾಟಕ ನಿರ್ಮಾಣಕ್ಕೆ ಅಭ್ಯರ್ಥಿ ಅನ್ಬುರಾಜ್ ರವರನ್ನ ಗೆಲ್ಲಿಸಬೇಕೆಂದು ಮತದಾರರಲ್ಲಿ ಮುರಳಿ ರೆಡ್ಡಿ ಮನವಿ ಮಾಡಿದರು.
ಈ ವೇಳೆ ಸೋಮಶೇಖರ್, ಸುಧಾ, ಶಶಿಕಲಾ, ಪದ್ಮ, ಧನಲಕ್ಷ್ಮಿ, ಶಿವಕುಮಾರ್ ಸ್ವಾಮಿ ಹಾಗು ಆನೇಕಲ್ ಕ್ಷೇತ್ರದ ಕೆಆರ್ಎಸ್ ಪಕ್ಷದ ಸೈನಿಕರು ಹಾಜರಿದ್ದರು.