ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮೇ 5: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಿ ಮತದಾನದ ವೇಳೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ಕಾರ್ಯನಿರ್ವಹಿಸಬೇಕೆಂದು ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು, ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾನದ ವೇಳೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಮತಗಟ್ಟೆಗಳ ಆರ್ಒ ಮತ್ತು ಎಆರ್ಓಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸುಸೂತ್ರವಾಗಿ ಮತದಾನ ನಡೆಯಲು ಎಚ್ಚರ ವಹಿಸಬೇಕೆಂದರು.
ಮುಕ್ತ ಸಂವಾದ:
ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಜೊತೆಗೆ ಚುನಾವಣಾಧಿಕಾರಿ, ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಮುಕ್ತವಾಗಿ ಸಂವಾದ ನಡೆಸಿ ಅನೇಕ ರೀತಿಯ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವ ಜೊತೆಗೆ ಶಾಂತಿಯುತ ಮತದಾನಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಬಿ.ಎನ್.ಸ್ವಾಮಿ, ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಮುನಿರಾಜು, ನಗರಸಭೆಯ ಪೌರಾಯುಕ್ತ ಆರ್.ಶ್ರೀಕಾಂತ್ ಹಾಗೂ ವಿವಿಧ ಮತಗಟ್ಟೆ ಕೇಂದ್ರಗಳ ಆರ್ಓ, ಎಆರ್ಓ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದೂರು ಸಲ್ಲಿಸಲು ಅವಕಾಶ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಐಎಎಸ್ ಅಧಿಕಾರಿ ವಿಜೆ ರಜಪೂತ್ ಅವರನ್ನು ಸಾಮಾನ್ಯ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು ಚುನಾವಣೆಗೆ ಸಂಬಂದಿಸಿದಂತೆ ಸಾರ್ವಜನಿಕರು, ಚುನಾವಣಾ ಅಭ್ಯರ್ಥಿಗಳು ತಮ್ಮ ಯಾವುದೇ ಅಹವಾಲು/ ದೂರುಗಳನ್ನು ಚುನಾವಣಾ ಸಾಮಾನ್ಯ ವೀಕ್ಷಕರಿಗೆ ನೀಡಿಬಹುದಾಗಿರುತ್ತದೆ ಎಂದು ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಾಮಾನ್ಯ ಚುನಾವಣಾ ವೀಕ್ಷಕರನ್ನು ಮೊಬೈಲ್ ದೂರವಾಣಿ ಸಂಖ್ಯೆ 9448360885 ಕರೆ ಮಾಡಬಹುದು ಅಥವಾ ಖುದ್ದಾಗಿ ಪ್ರತಿದಿನ ಬೆಳಗ್ಗೆ 10 ಗಂಟೆವರೆಗೆ ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಗೇಟ್ ಬಳಿ ಇರುವ ಪರಿವೀಕ್ಷಣಾ ಮಂದಿರದಲ್ಲಿ ಹಾಗೂ ಬೆಳಗ್ಗೆ 10 ಗಂಟೆಯ ನಂತರ ಶಿಡ್ಲಘಟ್ಟ ತಾಲೂಕು ಪರಿವೀಕ್ಷಣಾ ಮಂದಿರದಲ್ಲಿ ವೀಕ್ಷಕರನ್ನು ಭೇಟಿ ಮಾಡಲು ಅವಕಾಶವಿದ್ದು ಈ ಸೌಲಭ್ಯವನ್ನು ನಾಗರೀಕರು ಸದುಪಯೋಗ ಮಾಡಿಕೊಳ್ಳಬೇಕೆಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.