ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 11: ಚುನಾವಣೆ ಯಾವುದೇ ಇರಲಿ, ನಾವು ಮಾತ್ರ ಮನೆ ಬಿಟ್ಟು ಹೊರಬರುವುದಿಲ್ಲ, ಮತಗಟ್ಟೆ ಕೇಂದ್ರದತ್ತ ಸುಳಿಯುವುದೇ ಇಲ್ಲ ಎಂದು ಅರ್ಧದಷ್ಟು ಬೆಂಗಳೂರಿಗರು ಮತ್ತೊಮ್ಮೆ ನಿರೂಪಿಸಿದಂತೆ ಕಾಣುತ್ತಿದೆ. ಕಾರಣ ವಿಧಾನಸಭಾ ಚುನಾವಣೆಯಲ್ಲೂ ಸಹ ಬೆಂಗಳೂರಿನ ಮತದಾನ ಪ್ರಮಾಣ ಶೇ 55 ಮೀರದೆ, ತಮ್ಮ ಹಕ್ಕು ಚಲಾಯಿಸುವ ಬಗ್ಗೆ ನಗರವಾಸಿಗಳ ನಿರಾಸಕ್ತಿ ಮುಂದುವರಿದಿದೆ.
ಪದ್ಮನಾಭನಗರದಲ್ಲಿ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ತಕರ್ತರು ಪರಸ್ಪರ ಬಡಿದಾಡಿಕೊಂಡಂತಹ ಘಟನೆಗಳು ಬಿಟ್ಟರೆ ನಗರದಲ್ಲಿ ಬಹುತೇಕ ಶಾಂತಿಯುತವಾಗಿಯೇ ಮತದಾನ ನಡೆದಿದೆ.
ಆದರೆ, ಪ್ರತಿ ಬಾರಿ ಚುನಾವಣೆ ನಡೆದಾಗಲೂ ಸಹ ಬೆಂಗಳೂರಿಗರ ಮೇಲೆ ಒಂದು ಅಪವಾದ ಇದ್ದೇ ಇರುತ್ತದೆ. ರಾಜಧಾನಿಯ ಜನ ಚುನಾಯಿತ ಪ್ರತಿನಿಧಿಗಳ ಮೇಲೆ ಬೇಕಾಬಿಟ್ಟಿ ಮಾತನಾಡುತ್ತಾರೆ ಹೊರತು, ಮತದಾನದ ದಿನ ಮತಗಟ್ಟೆಗೆ ಬಂದು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಿಲ್ಲ ಎಂದು. ಅದು ಈ ಬಾರಿಯೂ ಸಹ ಮುಂದುವರಿದೆ.
ಬೆಂಗಳೂರಿನಲ್ಲಿ ಮಳೆ ಬಂದಾಗ, ರಸ್ತೆಗಳು ಜಲಾವೃತವಾದಾಗ ಪುಂಖಾನುಪುಂಖವಾಗಿ ಟ್ವಿಟರ್, ಫೇಸ್ಬುಕ್ಗಳ ಮೂಲಕ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಅರಚಾಡುವ ನಗರ ವಾಸಿಗಳು ಮತದಾನದ ದಿನ ಮಾತ್ರ ತಪ್ಪಿಸಿಕೊಂಡೇ ಇರುತ್ತಾರೆ ಎಂಬ ಆರೋಪವನ್ನು ಈ ಬಾರಿಯೂ ಸಾಬೀತು ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ನಗರ ನಾಲ್ಕೂ ವಿಭಾಗಗಳಲ್ಲಿಯೂ ಸಹ ಮತದಾನ ಮಂದಗತಿಯಲ್ಲಿಯೇ ನಡೆದಿತ್ತು.
ಬೆಂಗಳೂರಿಗರನ್ನು ಮತಗಟ್ಟೆ ಕೇಂದ್ರಕ್ಕೆ ಕರೆತರುವುದು ಈ ಬಾರಿ ರಾಷ್ಟ್ರೀಯ ವಿಷಯವೇ ಆಗಿತ್ತು. ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಕರ್ನಾಟಕದ ಚುನಾವಣಾ ದಿನಾಂಕ ಘೋಷಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮತದಾನ ಹೆಚ್ಚಿಸುವ ಬಗ್ಗೆ ಕೈಗೊಂಡಿದ್ದ ಹಲವಾರು ಕ್ರಮಗಳನ್ನು ವಿವರಿಸಿದ್ದರು. ವಾರಾಂತ್ಯ ಅಥವಾ ವಾರದ ಪ್ರಾರಂಭದಲ್ಲಿ ಮತದಾನ ದಿನಾಂಕ ಇದ್ದರೆ ಜನರು ದೀರ್ಘಾವಧಿ ರಜೆ ತೆರಳುತ್ತಾರೆ. ಆದ್ದರಿಂದ ಈ ಬಾರಿ ವಾರದ ಮಧ್ಯದಲ್ಲಿ ಬುಧವಾರ ಮತದಾನ ದಿನಾಂಕ ನಿಗದಿ ಮಡಲಾಗಿದೆ ಎಂದಿದ್ದರು.
ಇದಲ್ಲದೆ, ನಗರದಲ್ಲಿ ಬಿಬಿಎಂಪಿ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಓಟ, ಪಿಂಕಥಾನ್, ಬೀದಿ ನಾಟಕಗಳು, ಐಟಿ ಕಂಪೆನಿಗಳು ಮತ್ತು ಕೈಗಾರಿಕೆಗಳಿಗೇ ಹೋಗಿ ಅಲ್ಲಿನ ಸಿಬ್ಬಂದಿಗೆ ಜಾಗೃತಿ ಮೂಡಿಸುವುದು ಹೀಗೆ ಹತ್ತುಹಲವಾರು ಕ್ರಮ ಕೈಗೊಂಡಿದ್ದರೂ ಸಹ ಮತದಾಟನ ಅಲ್ಲಲ್ಲಿಗೇ ಬಂದು ನಿಂತಿದೆ.
ಎರಡು ಕಡೆ ಬಡಿದಾಡಿಕೊಂಡ ಕೈ-ಕಮಲ ಕಾರ್ಯಕರ್ತರು
ಬೆಂಗಳೂರಿನ ಬಿಎಟಿಂ ಬಡಾವಣೆಯ ಲಕ್ಕಸಂದ್ರದ ಮತಗಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ತೀವ್ರ ಗಲಾಟೆ ನಡೆದಿದೆ. ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆಗಿದೆ ಎಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಾಗಿದೆ. ಗಲಾಟೆಯಿಂದಾಗಿ ಕೆಲವು ಹೊತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಪದ್ಮನಾಭನಗರದಲ್ಲಿಯೂ ಸಹ ಬಿಜೆಪಿ ಸ್ಥಳೀಯ ನಾಯಕರು ಹೊರಗಡೆಯಿಂದ ಗೂಂಡಾಗಳನ್ನು ಕರೆದುಕೊಂಡು ಬಂದು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ನಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.