ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ.11: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆ ವರದಿ ಬಹಿರಂಗವಾಗಿದ್ದು, ಕಾಂಗ್ರೆಸ್ ಅಧಿಕಾರದ ಸನಿಹದಲ್ಲಿದೆ. ಆದರೆ, ಯಾರಿಗೂ ಸಹ ಪೂರ್ಣ ಬಹುಮತದ ನಿರೀಕ್ಷೆ ಇಲ್ಲ. ಕಳೆದ ಮೂರೂವರೆ ವರ್ಷಗಳ ಕಾಲ ಅಧಿಕಾರದ ನಡೆಸಿದ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತ ಎಂಬುದನ್ನು ವರದಿಗಳು ದೃಢಪಡಿಸಿವೆ.
ಸಿ-ವೋಟರ್, ರಿಪಬ್ಲಿಕ್ ಟಿವಿ, ಜೀ ನ್ಯೂಸ್, ಎಬಿಪಿ ನ್ಯೂಸ್, ಪೋಲ್ ಸ್ಟಾರ್ ಎಂಬ ಪ್ರಮುಖ ಸಂಸ್ಥೆಗಳು ಬುಧವಾರ ಸಂಜೆ 6 ಗಂಟೆ ಬಳಿಕ ಮತದಾನೋತ್ತರ ಸಮೀಕ್ಷೆ ಬಿಡುಗಡೆ ಮಾಡಿವೆ. ಮತ ಎಣಿಕೆ ಕಾರ್ಯ ಮೇ 13ರಂದು ಶನಿವಾರ ನಡೆಯಲಿದೆ. ಈಗ ಈ ಎಕ್ಸಿಟ್ ಪೋಲ್ ಸಮೀಕ್ಷಾ ವರದಿಗಳು ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ.
ಚಾಣಕ್ಯ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 120 ಸೀಟುಗಳ ಪೂರ್ಣ ಬಹುಮತ ಬರಲಿದೆ ಎಂದು ಹೇಳಿದ್ದರೆ, ಸಿ-ವೋಟರ್, ರಿಪಬ್ಲಿಕ್, ಜೀ ನ್ಯೂಸ್ ವರದಿಗಳು ಕಾಂಗ್ರೆಸ್ಗೆ ಸರಾಸರಿ 105ರಿಂದ 110 ಸೀಟುಗಳು ಬರಲಿವೆ ಎಂದು ವರದಿ ನೀಡಿವೆ.
ಸಿ ವೋಟರ್ ಸಮೀಕ್ಷೆ ಬಿಜೆಪಿಗೆ 83-95, ಕಾಂಗ್ರೆಸ್ಗೆ 100-112, ಜೆಡಿಎಸ್ 21-29 ಮತ್ತು ಇತರೆ 2ರಿಂದ 6 ಸ್ಥಾನಗಳು ಬರುತ್ತವೆ ಎಂದು ಅಂದಾಜಿಸಿದೆ. ಅದೇ ರೀತಿ ರಿಪಬ್ಲಿಕ್ ಟಿ.ವಿ. ಬಿಜೆಪಿಗೆ 85-100, ಕಾಂಗ್ರೆಸ್ 94-108
ಜೆಡಿಎಸ್ 24-38 ಮತ್ತು ಇತರೆ 02-06 ಸೀಟುಗಳು ಬರಹುದು ಎಂದು ವರದಿ ನೀಡಿದೆ.
ಚಾಣಕ್ಯ ಸಂಸ್ಥೆ ಕಾಂಗ್ರೆಸ್ 120 ಸ್ಥಾನಗಳೊಂದಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಬಿಜೆಪಿಗೆ 92 ಸ್ಥಾನ ಬಂದರೆ, ಜೆಡಿಎಸ್ 12 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಹೇಳಿದೆ. ಟೈಮ್ಸ್ ನೌ ಚಾನಲ್ ಸಹ ಕಾಂಗ್ರೆಸ್ಗೆ 113 ಸ್ಥಾನಗಳು ಬರಲಿವೆ ಎಂದು ಹೇಳಿದೆ.
ಅತಂತ್ರ ಸರ್ಕಾರ?
ಚಾಣಕ್ಯ ಮತ್ತು ಟೈಮ್ಸ್ ನೌ ಮಾತ್ರ ಕಾಂಗ್ರೆಸ್ಗೆ ಬಹುಮತ ಬರಲಿದೆ ಎಂದು ಹೇಳಿದರೆ, ಉಳಿದ ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ಗೆ ಮುನ್ನಡೆ ಇದೆ. ಅಂದರೆ 100 ಸೀಟುಗಳನ್ನು ದಾಟಬಹುದು ಎಂದು ಹೇಳಿವೆ. ಇದು ನಿಜವಾದರೆ, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹ ಪೂರ್ಣ ಬಹುಮತ ಬಾರದೆ ಅತಂತ್ರ ಸರ್ಕಾರ ನಿರ್ಮಾಣ ಆಗಬಹುದು. ಆಗ ಜೆಡಿಎಸ್ ಅಥವಾ ಪಕ್ಷೇತರರು ನಿರ್ಣಾಯಕರಾಬಹುದಾದ ಸಾಧ್ಯತೆಯೂ ಇದೆ.
ಬಿಜೆಪಿ ಅಧಿಕಾರ ಕೊನೆ?
ಈ ಬಾರಿಯ ಚುನಾವಣೆ ಪ್ರತಿಷ್ಠೆ ಕಣವಾಗಿತ್ತು. ಅದರಲ್ಲೂ ಕಳೆದ ಮೂರುವರೆ ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿಗೆ ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ, ದಕ್ಷಿಣ ಭಾರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯತೆ ಇತ್ತು. ಅದಕ್ಕಾಗಿಯೇ ರಾಜ್ಯ ನಾಯಕತ್ವದಲ್ಲಿ ಏರುಪೇರಾದರೂ ಸಹ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದರು. ಆದರೆ, ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಗಮನಿಸಿದಾಗ ಬಿಜೆಪಿಯ ಕಮಲ ಮುದುಡುವುದು ಖಚಿತ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಈ ಬಾರಿ ರಾಜ್ಯದ ನಾಯಕರ ಮುಂದಾಳ್ವರದಲ್ಲಿಯೇ ಚುನಾವಣೆ ಎದುರಿಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಆಂತರಿಕವಾಗಿ ಏನೇ ಇದ್ದರೂ ಸಹ ಒಗ್ಗಟ್ಟಾಗಿ ಚುಣಾವಣೆ ಎದುರಿಸಿದರು. ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಎಲ್ಲರನ್ನೂ ಒಟ್ಟುಗೂಡಿಸಿ ಮೊದಲು ಪಕ್ಷ ಅಧಿಕಾರಕ್ಕೆ ತರಬೇಕು ಎಂಬ ನಿರ್ದೇಶನ ನೀಡುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ಭಾರತ್ ಜೋಡೊ ಯಾತ್ರೆ ಮೂಲಕ ಕನ್ನಡಿಗರಿಗೂ ಹತ್ತಿರವಾಗಿದ್ದ ರಾಹುಲ್ಗಾಂಧಿ ಮತ್ತೊಮ್ಮೆ ರಾಜ್ಯ ಸುತ್ತಿದರು. ಇದೆಲ್ಲವೂ ಕಾಂಗ್ರೆಸ್ಗೆ ಪ್ಲಸ್ ಆಗಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಸ್ಥಾನ ಮತ್ತಷ್ಟು ಕಡಿಮೆ?
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 37 ಸ್ಥಾನಗಳನ್ನು ಗಳಿಸಿತ್ತು. ಆದರೆ, ಈ ಬಾರಿ ಬಹುತೇಕ ಸಮೀಕ್ಷೆಗಳು ಜೆಡಿಎಸ್ ಪಕ್ಷವನ್ನು 25ರಿಂದ 30 ಸೀಟುಗಳು ಮಾತ್ರ ಬರಲಿವೆ ಎಂದು ಹೇಳಿದೆ. ಒಂದು ವೇಳೆ ಮತ ಎಣಿಕೆಯಲ್ಲೂ ಇದು ನಿಜವೇ ಆದರೆ ಜೆಡಿಎಸ್ ಕಳೆದ ಬಾರಿಗಿಂತಲೂ ಈ ಸಹ ಒಂದಷ್ಟು ಸೀಟುಗಳನ್ನು ಕಳೆದುಕೊಳ್ಳುವುದು ನಿಶ್ಚಿತವಾಗುತ್ತದೆ.