ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ,11: ಎಕ್ಸಿಟ್ ಪೋಲ್ ಸಮೀಕ್ಷಾ ವರದಿ ಸುಳ್ಳಾಗಲಿದೆ. ನಾವು ಈ ಬಾರಿ ಸರಕಾರ ರಚಿಸಲಿದ್ದೇವೆ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಕು.ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜನರ ಉತ್ಸಾಹದ ಮತದಾನ, ಬೂತ್ಗಳಲ್ಲಿ ನಮಗೆ ಕಂಡುಬಂದ ವರದಿ ಮತ್ತು ಉತ್ಸಾಹಗಳು ಇದಕ್ಕೆ ಕಾರಣ. ನಮ್ಮ ಕಾರ್ಯಕರ್ತರ ಸಮೀಕ್ಷೆ ಆಧಾರದಲ್ಲಿ ನೂರಕ್ಕೆ 100 ಬಿಜೆಪಿ ಬಹುಮತದ ಸರಕಾರವನ್ನು ರಚಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರ ಪ್ರಾಥಮಿಕ ವರದಿಯಂತೆ 120-125 ಕಡೆ ನಾವು ಲೀಡ್ನಲ್ಲಿದ್ದೇವೆ. ನಾವು ಬಹುಮತದ ಸರಕಾರ ರಚಿಸುತ್ತೇವೆ. ಜೆಡಿಎಸ್ ಭೂಮಿಕೆ ಕುರಿತು ನನಗೆ ಅರಿವಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷದಿಂದ ಸುಶಿಕ್ಷಿತ, ಯುವ ಅಭ್ಯರ್ಥಿಗಳಿದ್ದರು. ಅಲ್ಲಿ ಅತ್ಯುತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ತಿಳಿಸಿದರು. ಇಂದು ಕಾರ್ಯಕರ್ತರು ಗೆಲುವಿನ ಕುರಿತು ಲೆಕ್ಕಾಚಾರ ಮಾಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಕೊಟ್ಟರು.
ನಮ್ಮ ವರದಿ, ಯಡಿಯೂರಪ್ಪ ಅವರ ವರದಿ ಸುಳ್ಳಾಗಿಲ್ಲ. ಯಡಿಯೂರಪ್ಪನವರು 120 ಸೀಟು ದಾಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದು ನಿಜವಾಗಲಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ರಾಜ್ಯದ ಜನರು ಅಭಿವೃದ್ಧಿಗಾಗಿ ಬಹುಮತದ ಬಿಜೆಪಿ ಸರಕಾರ ಕೊಡಲಿದ್ದಾರೆ ಎಂದು ನುಡಿದರು. ಅತಂತ್ರ ಸ್ಥಿತಿ ಖಂಡಿತವಾಗಿ ಬರುವುದಿಲ್ಲ. ಕಾಯೋಣ ಎಂದು ನುಡಿದರು.
ಕೆಲವು ಜಿಲ್ಲೆಗಳಲ್ಲಿ 80- 83 ಶೇಕಡಾ ಮತ ಚಲಾವಣೆ ಆಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಿದ ಮತದಾರರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ಒಂದು ಒಳ್ಳೆಯ ಸರಕಾರವನ್ನು ರಾಜ್ಯ ಮತ್ತು ದೇಶದಲ್ಲಿ ತರಲು ಹಾಗೂ ನಮ್ಮ ಸ್ಥಳೀಯ ಸಂಸ್ಥೆಯಲ್ಲಿ ಒಳ್ಳೆಯ ವ್ಯವಸ್ಥೆಯನ್ನು ತರಲು ಮತದಾನ ಅಗತ್ಯವಾಗಿ ಬೇಕಾಗಿದೆ ಎಂದರು. ಜನರ ಅಭಿಪ್ರಾಯದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಿಂತಿದೆ ಎಂದು ತಿಳಿಸಿದರು.
65 ವರ್ಷ ದಾಟಿದವರಿಗೆ ಆನ್ಲೈನ್ ಮತದಾನದ ಅವಕಾಶ ಇದ್ದರೂ ಅನೇಕ ಹಿರಿಯರು ಬೂತ್ಗೆ ಬಂದು ಕ್ಯೂನಲ್ಲಿ ನಿಂತು ಮತದಾನ ಮಾಡಿದ್ದಾರೆ. ಅವರಿಗೆ ಮತ್ತು ಪ್ರಚಾರದಲ್ಲಿ ಸಹಕರಿಸಿದ ಮಾಧ್ಯಮಗಳಿಗೂ ಧನ್ಯವಾದಗಳು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಆಯೋಗ, ಪಕ್ಷಗಳ ಪ್ರಯತ್ನದ ಬಳಿಕವೂ ಶೇ 52-53 ಮತದಾನ ಆಗಿದೆ. ಆದರೂ ಕಡಿಮೆ ಮತದಾನ ಆಗಿರುವುದು ಬೇಸರದ ವಿಚಾರ ಎಂದ ಅವರು, ಬೆಂಗಳೂರಿಗರು ಸಾಕಷ್ಟು ಪ್ರಮಾಣದಲ್ಲಿ ಮತದಾನ ಮಾಡುವುದಿಲ್ಲ ಎಂಬ ಬೇರೆ ಜಿಲ್ಲೆಯವರ ಮಾತು ನಿಜವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನತೆ ಪ್ರಜಾತಂತ್ರದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿ ಎಂದು ಆಶಿಸಿದರು. ಇದಕ್ಕಾಗಿ ಇನ್ನಷ್ಟು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಮಹೇಶ್ ಎಂ.ಜಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಬಿಜೆಪಿ ಮುಖಂಡ ಎಂ.ಆರ್.ವೆಂಕಟೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು